ಬೆಳ್ತಂಗಡಿ : ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂದು ಕರೆ ನೀಡಿದ ನಾರಾಯಣಗುರುಗಳು, ಇದನ್ನ ಬಿಲ್ಲವ ಸಮುದಾಯಕ್ಕಷ್ಟೇ ಹೇಳಿಲ್ಲ. ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳನ್ನು ಉದ್ದೇಶಿಸಿ ಹೇಳಿದ್ದರು ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.
ನಾರಾವಿಯಿಂದ ಅಳದಂಗಡಿವರೆಗೆ ಕಾಂಗ್ರೆಸ್ ರೋಡ್ ಶೋ ಬಳಿಕ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾರಾಯಣಗುರು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದರು. ಇದೇ ಹಾದಿಯಲ್ಲಿ ಬಸವಣ್ಣ, ಅಂಬೇಡ್ಕರ್ ಅವರು ಸಾಗಿದ್ದರು. ಇವರೆಲ್ಲರ ಉದ್ದೇಶ ಹಿಂದುಳಿದ ವರ್ಗಗಳ ಕಲ್ಯಾಣ. ಇದೀಗ ಜನಾರ್ದನ ಪೂಜಾರಿ ಅವರ ಶಿಷ್ಯ ಪದ್ಮರಾಜ್ ಆರ್. ಪೂಜಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಹಿಂದುಳಿದ ವರ್ಗಗಳ ಧ್ವನಿಯಾಗಿ. ಸಣ್ಣಪುಟ್ಟ ಸಮುದಾಯಗಳ ಉದ್ಧಾರಕ್ಕಾಗಿ, ಎಲ್ಲಾ ದುರ್ಬಲ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯಲು ಪದ್ಮರಾಜ್ ಗೆಲ್ಲಬೇಕು. ಅವರು ಶಿಕ್ಷಣ, ಆರೋಗ್ಯದ ವಿಚಾರ ಬಿಟ್ಟು ಬೇರೇನನ್ನೂ ಮಾತನಾಡುತ್ತಿಲ್ಲ. ಹಾಗಾಗಿ ಈ ಬಾರಿ ಗೆದ್ದೇ ಗೆಲ್ತೀವಿ ಅನ್ನುವ ಆತ್ಮವಿಶ್ವಾಸದೊಂದಿಗೆ ಕೆಲ್ಸ ಮಾಡಿ ಎಂದರು.
ಗ್ಯಾರೆಂಟಿ ಯೋಜನೆಯಿಂದ ಜನರು ಸ್ವಾಭಿಮಾನದ ಬದುಕು ಕೊಟ್ಟಿಕೊಂಡಿದ್ದಾರೆ. ಆದರೆ ವಿಪಕ್ಷಗಳು ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಸನಾಂಬೆ, ಶೃಂಗೇರಿ ಶಾರದೆಯ ದರ್ಶನಕ್ಕೆ ಬರುವ ಹೆಣ್ಣುಮಕ್ಕಳು, ದೇವರ ದರ್ಶನಕ್ಕೆ ಬಂದರೆ ಹಾಳಾಗುವುದು ಹೇಗೆ? ಅಪಪ್ರಚಾರ ನಡೆಸುವ ಬಿಜೆಪಿ ಇದೀಗ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಗ್ಯಾರೆಂಟಿ ಯೋಜನೆ ನೀಡುತ್ತಿದೆ. ಕಾಂಗ್ರೆಸಿನ ಯೋಜನೆಗಳನ್ನು ಕಾಪಿ ಮಾಡುತ್ತಿವೆ ಎಂದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಹತ್ತು ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿರುವ ಹೆಮ್ಮೆ ಕಾಂಗ್ರೆಸ್ ಸರಕಾರದ್ದು. ಆದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಪದ್ಮರಾಜ್ ಆರ್. ಪೂಜಾರಿ ಗೆಲ್ಲಬೇಕು ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ರಂಜನ್ ಗೌಡ, ನಾಗೇಶ್ ಗೌಡ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಪ್ರತಿಭಾವಂತ ಕುಳಾಯಿ, ಶ್ಯಾಲೆಟ್ ಪಿಂಟೋ, ಶಕುಂತಳಾ ಗಟ್ಟಿ, ಧರ್ಣೇಂದ್ರ ಕುಮಾರ್, ವಂದನಾ ಭಂಡಾರಿ, ಲಕ್ಷ್ಮೀಶ್ ಗಬ್ಬಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಸ್ವಾಗತಿಸಿದರು. ಶೇಖರ್ ಕುಕ್ಕೆಟ್ಟಿ ವಂದಿಸಿದರು.


