ಬೆಳ್ತಂಗಡಿ ; ಕಾಂಗ್ರೆಸ್ ಮುಖಂಡ ಬಿಲ್ಲವ ಸಮಾಜದ ನಾಯಕ ಬೆಳ್ತಂಗಡಿ ಶಾಸಕ ವಸಂತ್ ಬಂಗೇರ ಇಂದು ಸಂಜೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ದೀರ್ಘ ಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ನಾಯಕ ಬಂಗೇರ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಬಂಗೇರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಹಲವು ತಿಂಗಳಿನಿಂದ ನಿರಂತರ ಚಿಕಿತ್ಸೆಗೆ ಒಳಗಾಗಿದ್ದರು.
ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ 1946 ರಲ್ಲಿ ಜನಿಸಿದ ಇವರು ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪುತ್ರ. 1972 ರಲ್ಲಿ ಕುವೆಟ್ಟು ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಎಂಟ್ರಿ ಕೊಟ್ಟಿದ್ದರು. ಬಳಿಕ 1983 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಳ್ತಂಗಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1983 ಹಾಗೂ 1985 ಎರಡು ಬಾರಿ ಬಿಜೆಪಿಯಲ್ಲಿದ್ದ ವಸಂತ ಬಂಗೇರ 1989 ರಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಆದರೆ ಅಲ್ಲಿ ಮೊದಲ ಸೋಲು ಕಂಡಿದ್ದ ವಸಂತ ಬಂಗೇರ ಮತ್ತೆ 1994 ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 1999 ಮತ್ತು 2004 ರಲ್ಲಿ ನಡೆದ ಚುನಾವಣೆಯಲ್ಲಿ ನಿರಂತರ ಸೋಲು ಕಂಡಿದ್ದರು. ಈ ವೇಳೆ ಹಾಲಿ ಸಿಎಂ ಸಿದ್ಧರಾಮಯ್ಯ ಅವರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ವಸಂತ ಬಂಗೇರ ಅವರು 2006 ರಲ್ಲಿ ಸಿದ್ಧರಾಮಯ್ಯ ಅವರ ಜೊತೆ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಬಳಿಕ 2008ರಲ್ಲಿ ಹಾಗೂ 2013 ರಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ, ಸರ್ಕಾರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. 2018 ರಲ್ಲಿ ಹಾಲಿ ಶಾಸಕ ಹರೀಶ್ ಪೂಂಜಾ ಅವರ ಎದರು ಸೋಲು ಅನುಭವಿಸಿದ ವಸಂತ ಬಂಗೇರ 2023 ರಲ್ಲಿ ಕ್ಷೇತ್ರವನ್ನು ರಕ್ಷಿತ್ ಶಿವರಾಮ್ ಅವರಿಗೆ ಬಿಟ್ಟು ಕೊಟ್ಟು ರಾಜಕೀಯದಿಂದ ದೂರ ಉಳಿದಿದ್ದರು. ಇದೇ ವೇಳೆ ಅಸೌಖ್ಯ ಕಾಡಿದ್ದು ಕಳೆದ ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂದು ವರ್ಗದವರನ್ನು ಅಗಲಿದ್ದಾರೆ.
ಮೇ. 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ
ಇಂದು ನಿಧನರಾದ ಬಂಗೇರ ಅವರ ಪಾರ್ಥಿವ ಶರೀರ ಮೇ 9ರಂದು ಮುಂಜಾನೆ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.


