ಬೆಂಗಳೂರು : ರಾಜ್ಯದಲ್ಲಿ ಹೈ ಸೆಕ್ಯೂರೆಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸದ ವಾಹನ ಸವಾರರ ವಿರುದ್ಧ ಜೂನ್ 12ರವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಭರವಸೆ ನೀಡಿದೆ.
ಎಚ್ಎಸ್ಆರ್ಪಿ ಅಳವಡಿಕೆಗೆ ಮೇ 31ರವರೆಗೆ ವಿಧಿಸಲಾಗಿರುವ ಗಡವನ್ನು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಚ್ಎಸ್ಆರ್ಪಿ ತಯಾರಿಕಾ ಕಂಪನಿಯಾದ ಬಿಎನ್ ಡಿ ಎನರ್ಜಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರ ನ್ಯಾಯಪೀಠಕ್ಕೆ ಸರ್ಕಾರ ಈ ಭರವಸೆ ನೀಡಿದೆ.
ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರ್ಕಾರ ನೀಡಿದ ಗಡುವು ಈ ತಿಂಗಳು ಅಂದರೆ ಮೇ 31ಕ್ಕೆ ಅಂತ್ಯವಾಗಲಿದೆ. ಆದರೂ ಸಹ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದವರ ವಿರುದ್ಧ ಜೂನ್ 12ರವರೆಗೆ ಯಾವುದೇ ಕ್ರಮವಿಲ್ಲ. ಈ ಬಗ್ಗೆ ಸ್ವತಃ ರಾಜ್ಯ ಸರ್ಕಾರವೇ ಹೈಕೋರ್ಟ್ಗೆ ತಿಳಿಸಿದೆ. ಹೀಗಾಗಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳದ ವಾಹನ ಸವಾರರಿಗೆ ಜೂನ್ 12 ಕಾಲಾವಕಾಶವಿದೆ ಎಂದು ತಿಳಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೂಬೆನ್ ಜೇಕಬ್, ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾವೆ ಬರುವ ಜೂ.11ರಂದು ವಿಚಾರಣೆಗೆ ನಿಗದಿಯಾಗಿದೆ. ಹೀಗಾಗಿ, ಈ ಮಧ್ಯಂತರ ಅರ್ಜಿ ಸಂಬಂಧ ಯಾವುದೇ ಆದೇಶ ಹೊರಡಿಸಬಾರದು ಎಂದು ಕೋರಿದರು.
ಸಾರಿಗೆ ಇಲಾಖೆ ಮೊದಲು ನಂಬರ್ ಪ್ಲೇಟ್ ಅಳವಡಿಕೆ ಮಾಡಲು 2023ರ ನವೆಂಬರ್ 17ರ ಗಡುವು ಕೊಟ್ಟಿತ್ತು. ಬಳಿಕ ಅದನ್ನು 2024ರ ಫೆಬ್ರವರಿ 17ರ ತನಕ ವಿಸ್ತರಣೆ ಮಾಡಲಾಗಿತ್ತು, ನಂತರ ಅದನ್ನು ಮೇ 31ರ ವರೆಗೆ ವಿಸ್ತರಿಸಲಾಗಿತ್ತು. ಆದ್ರೆ, ಮತ್ತಷ್ಟು ದಿನ ವಿಸ್ತರಣೆ ಮಾಡುವಂತೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಇದೀಗ ರಾಜ್ಯ ಸರ್ಕಾರ ಜೂನ್ 12ರ ವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಇನ್ನೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರರಿಗೆ ಜೂನ್ 12ರ ವರೆಗೆ ಕಾಲಾವಕಾಶ ಸಿಕ್ಕಂತಾಗಿದೆ.


