ಬೆಂಗಳೂರು : ತಮಗೆ ಬರಬೇಕಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘ ಮತ್ತೆ ಮುಖ್ಯ ಸಿಎಂಗೆ ಪತ್ರ ಬರೆದಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಲ್ಲೂ 40% ಕಮೀಷನ್ ಹಾಗೂ ಕಾಂಗ್ರೆಸ್ ಸರ್ಕಾರ ಬಂದ ಕೆಲ ಕಾಲದ ನಂತರ ಕಮೀಷನ್ ವಿಷಯ ಪ್ರಸ್ತಾಪಿಸಿದ್ದ ಗುತ್ತಿಗೆದಾರರ ಸಂಘ ಇದೀಗ ಮತ್ತೊಮ್ಮೆ ಲೋಕೋಪಯೋಗಿ,ಸಣ್ಣ ನೀರಾವರಿ ಇಲಾಖೆ ವಿರುದ್ಧ ಸಿಎಂಗೆ ಪತ್ರ ಬರೆದಿದೆ.
ತಮ್ಮ ಕಾಮಗಾರಿಗೆ ಹಣ ಬಿಡುಗಡೆಗೆ ಮಾಡುವಲ್ಲಿ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಮಧ್ಯವರ್ತಿಗಳು ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೆ ಸ್ಪೆಷಲ್ ಎಲ್‌ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಲೋಕೋಪಯೋಗಿ ಇಲಾಖೆಯ ನಾಲ್ಕು ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಣದ ಕೈಗಳ ಬಗ್ಗೆ ಚರ್ಚೆ ಮಾಡಿ ಸಣ್ಣ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಕುರಿತು ಸಂಘದ ಅಧ್ಯಕ್ಷ ಮಂಜುನಾಥ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಸಚಿವರ ಪುತ್ರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಸಕಾಲಕ್ಕೆ ಬಿಲ್ ಪಾವತಿ ಮಾಡುತ್ತಿಲ್ಲ.ಜೇಷ್ಠತೆ ಆಧಾರದಡಿ ಪಾವತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆಇದನ್ನು ಪಾಲನೆ ಮಾಡುತ್ತಿಲ್ಲ. ತಮಗೆ ಬೇಕಾದವರಿಗೆ ಹಾಗೂ ದೊಡ್ಡ ದೊಡ್ಡವರಿಗೆ ಬಾಕಿ ಬಿಲ್ ಪಾವತಿ ಮಾಡಲಾಗುತ್ತಿದೆ. 5 ರಿಂದ 5೦ ಕೋಟಿವರೆಗೆ ಬಿಲ್ ಇರುವವರಿಗೆ ಬಿಲ್ ಪಾವತಿ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಹೀಗಿಗೆ ಆಗುತ್ತದೆ ಎಂದು ಅಧಿಕಾರಿಗಳಿಗೆ ಹೇಳಿದಾಗ ಅವರು ನಮಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ನಮಗೆ ಸಚಿವರ ಬಗ್ಗೆ ಯಾವ ದೂರೂ ಇಲ್ಲ. ಅವರಿಗೆ ಈ ವಿಷಯ ತಿಳಿದಿದೆಯೋ ಇಲ್ಲವೋ ಎಂದು ಮಂಜುನಾಥ್ ಹೇಳಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವರ ಪುತ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಇದಲ್ಲದೆ, ಈ ಇಲಾಖೆಗಳ ಮುಖ್ಯಸ್ಥರು ಕೂಡಾ ದೊಡ್ಡ ದೊಡ್ಡ ಗುತ್ತಿಗೆದಾರರಿಗೆ 100, 200 ಕೋಟಿಗಳನ್ನು ಬಿಡುಗಡೆ ಮಾಡುತ್ತಿಲ್ಲ. 5 ರಿಂದ 5೦ ಕೋಟಿ ರೂ. ಬಿಲ್ ಬಾಕಿ ಇರುವವರು ಶೇ. ೬೦ರಷ್ಟು ಗುತ್ತಿಗೆದಾರರಿದ್ದಾರೆ. ಬಾಕಿಗಾಗಿ 3 ವರ್ಷದಿಂದ ಕಚೇರಿ ಅಲೆಯುತ್ತಿದ್ದಾರೆ. ಆದರೂ ಬಾಕಿ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.