ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮ್ಗಳ ಚಟ ಕೇವಲ ವೈಯಕ್ತಿಕ ಆರೋಗ್ಯವನ್ನಷ್ಟೇ ಅಲ್ಲ, ಇಡೀ ಕುಟುಂಬಗಳ ಅಸ್ತಿತ್ವವನ್ನೇ ಅಲುಗಾಡಿಸುತ್ತಿದೆ. ನಿಮ್ಹಾನ್ಸ್ ನಡೆಸಿದ ಅಧ್ಯಯನದ ಪ್ರಕಾರ 2022ರಲ್ಲಿ ಕರ್ನಾಟಕದಲ್ಲಿ ತಂತ್ರಜ್ಞಾನ ವ್ಯಸನದ ಪ್ರಮಾಣ ಭಯಾನಕವಾಗಿದೆ. ರಾಜ್ಯದಲ್ಲಿನ ಶೇ.10.69ರಷ್ಟು ಮಂದಿ ತಂತ್ರಜ್ಞಾನ ವ್ಯಸನಕ್ಕೆ, ಶೇ.8.91ರಷ್ಟು ಜನ ಮೊಬೈಲ್ ಫೋನ್ ವ್ಯಸನಕ್ಕೆ, ಶೇ.2.55 ಗೇಮಿಂಗ್ ವ್ಯಸನಕ್ಕೆ ಒಳಗಾಗಿದ್ದಾರೆ. ಒಂಟಿತನ, ಶೈಕ್ಷಣಿಕ ಹಿನ್ನಡೆ ಮತ್ತು ಸಾಮಾಜಿಕ ಬೆಂಬಲದ ಕೊರತೆ ಇರುವ ಮಕ್ಕಳಲ್ಲಿ ಈ ವ್ಯಸನ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಖಿನ್ನತೆ ಮತ್ತು ಎಡಿಎಚ್ಡಿ ಇರುವ ಮಕ್ಕಳು ನೈಜ ಪ್ರಪಂಚದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಗೇಮಿಂಗ್ ಅನ್ನು ಒಂದು ಭಾವನಾತ್ಮಕ ಪಲಾಯನ ಮಾರ್ಗವಾಗಿ ಬಳಸುತ್ತಿದ್ದಾರೆ.
ವಿಶೇಷವಾಗಿ 16 ವರ್ಷದೊಳಗಿನ ಮಕ್ಕಳು ಈ ಗೇಮಿಂಗ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೇ ಕನ್ನಡದ ನಟಿಯ ಸಹೋದರಿ ಇಂಥದ್ದೇ ಆನ್ಲೈನ್ ಗೇಮಿಂಗ್ಗೆ ಸಾಲ ಮಾಡಿ ಅವರ ಕುಟುಂಬದ ಜಗಳ ಬೀದಿ ರಂಪವಾಗಿ ಮಾರ್ಪಟ್ಟಿತ್ತು. ಕೆಲವೊಂದು ಸಾವಿನಲ್ಲಿ ಅಂತ್ಯವಾದ ಘಟನೆಗಳೂ ಸಾಕಷ್ಟಿವೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್, ಮೊಬೈಲ್ ವೀಕ್ಷಣೆಯಿಂದ ತೊAದರೆಗೊಳಗಾಗುವ ಮಕ್ಕಳನ್ನು ಕರೆದುಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ. ಆನ್ಲೈನ್ ಗೇಮ್ಗಳನ್ನು ವಿನ್ಯಾಸಗೊಳಿಸುವ ರೀತಿಯೇ ಆತಂಕಕಾರಿಯಾಗಿದೆ ಎಂದು ನಿಮ್ಹಾನ್ಸ್ನ ಶಟ್ ಕ್ಲಿನಿಕ್ ನಿರ್ದೇಶಕ ಡಾ. ಮನೋಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಗೇಮ್ನಲ್ಲಿ ಸಿಗುವ ಗೆಲುವು ಅಥವಾ ಪಾಯಿಂಟ್ಗಳು ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಇದು ಮಕ್ಕಳಿಗೆ ಸಾಧನೆಯ ಭ್ರಮೆಯನ್ನು ಉಂಟುಮಾಡುತ್ತದೆ. ಒಮ್ಮೆ ಇದಕ್ಕೆ ಅಡಿಕ್ಟ್ ಆದರೆ, ಅವರಿಗೆ ನೈಜ ಪ್ರಪಂಚಕ್ಕಿAತ ವರ್ಚುವಲ್ ಪ್ರಪಂಚವೇ ಸತ್ಯವೆನಿಸುತ್ತದೆ ಎಂದು ಅವರು ವಿವರಿಸಿದ್ದಾರೆ
ಮಕ್ಕಳಲ್ಲಿ ಈ ಕೆಳಗಿನ ಲಕ್ಷಣ ಕಂಡರೆ ಎಚ್ಚರವಹಿಸಿ. ಮೊಬೈಲ್ ಕಿತ್ತುಕೊಂಡಾಗ, ನೆಟ್ ವರ್ಕ್ ಹೋದಾಗ ಅತಿಯಾದ ಆಕ್ರೋಶ ವ್ಯಕ್ತಪಡಿಸುವುದು. ಊಟ, ನಿದ್ರೆ ಮರೆತು ಸದಾ ರೂಮಿನ ಒಳಗೆ ಅಥವಾ ಮೂಲೆಯಲ್ಲಿ ಕುಳಿತು ಮೊಬೈಲ್ ನೋಡುವುದು. ಶಾಲಾ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗುವುದು ಮತ್ತು ಅಂಕಗಳು ಕುಸಿಯುವುದು. ಮೊಬೈಲ್ ಬಳಸಲು ಅಥವಾ ಗೇಮ್ ರೀಚಾರ್ಜ್ ಮಾಡಲು ಸುಳ್ಳು ಹೇಳುವುದು ಅಥವಾ ಹಣ ಕದಿಯುವುದು.
ಈ ಬಗ್ಗೆ ತಜ್ಞರು ಮಕ್ಕಳ ಪೋಷಕರಿಗೆ ಕಿವಿಮಾತು ಹೇಳಿದ್ದು ವಾರಕ್ಕೊಮ್ಮೆ ಮನೆಯವರೆಲ್ಲರೂ ಮೊಬೈಲ್ ಬಳಸದ ದಿನವನ್ನು ಆಚರಿಸಲು ಸೂಚಿಸಿದ್ದಾರೆ. ಮಗು ಏಕಾಂಗಿಯಾಗುತ್ತಿದೆಯೇ? ಓದಿನಲ್ಲಿ ಹಿನ್ನಡೆಯಾಗುತ್ತಿದೆಯೇ? ಗಮನಿಸಲು ತಿಳಿಸಿದ್ದಾರೆ. ಮೊಬೈಲ್ ಬದಲಿಗೆ ಅವರ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಲು ಸೂಚಿಸಿದ್ದು ಸಂಕೋಚ ಬಿಟ್ಟು ಮನೋವೈದ್ಯರ ಬಳಿ ಕರೆದೊಯ್ದ .ಮೊಬೈಲ್ ಎಂಬುದು ಕೇವಲ ಸಾಧನವಾಗಬೇಕೇ ಹೊರತು, ಅದು ನಮ್ಮ ಜೀವನದ ನಿಯಂತ್ರಕವಾಗಬಾರದು ಎಂದು ತಿಳಿಸಿದ್ದಾರೆ .


