ಬೆಂಗಳೂರು ; ಮಗನಿಗೆ ಟಿಕೆಟ್ ಸಿಗಲಿಲ್ಲ ಎಂದು ಕೋಪಗೊಂಡಿದ್ದ ಈಶ್ವರಪ್ಪನವರ ಮನಹೋಲಿಸಲು ಬಿಜೆಪಿ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ.ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.ಬುಧವಾರ ದೆಹಲಿಗೆ ಬರುವಂತೆಯೂ ಸೂಚನೆ ನೀಡಿದ್ದಾರೆ.ಈಶ್ವರಪ್ಪ ದೆಹಲಿಗೆ ಹೋಗುವುದಾಗಿ ಆಪ್ತರ ಜತೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ರಾತ್ರಿಯೇ ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರದ ಬಗ್ಗೆ ನಾಯಕರ ಜೊತೆ ಚರ್ಚೆ ನಡೆಸುತ್ತಿರುವ ಅಮಿತ್ ಶಾ ಅವರು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಜೊತೆಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೆಎಸ್ ಈಶ್ವರಪ್ಪ, ‘ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ. ಅವರ ಕೋರಿಕೆಯ ಮೇರೆಗೆ ದೆಹಲಿಗೆ ಹೋಗುತ್ತೇನೆ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಈಶ್ವರಪ್ಪ 10 ನಿಮಿಷಗಳ ಕಾಲ ಮಾತನ್ನಾಡಿದ ಅಮಿತ್ ಶಾ ಅವರು ಕೆಲವು ಭರವಸೆಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ತನ್ನ ಮಗನಿಗೆ ಟಿಕೆಟ್ ಸಿಗಲಿಲ್ಲ ಎಂದು ಕೋಪಗೊಂಡಿದ್ದ ಈಶ್ವರಪ್ಪನವರು ಅಮಿತ್ ಶಾ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ದೂರವಾಣಿಯಲ್ಲಿ ಅಮಿತ್ ಶಾ ಕೊಟ್ಟಿರುವ ಭರವಸೆಯನ್ನು ಈಶ್ವರಪ್ಪ ಒಪ್ಪಿಕೊಂಡಿದ್ದು, ಯಡಿಯೂರಪ್ಪ ಪುತ್ರನ ವಿರುದ್ಧ ಚುನಾವಣಾ ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


