ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿ 70 ಗಂಟೆಗಳೇ ಕಳೆದಿವೆ. ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ NIA ಗೆ ವರ್ಗಾಯಿಸಲಾಗಿದೆ.ರಾಜ್ಯ ಪೊಲೀಸರ ಹಲವಾರು ತಂಡಗಳು ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲ ದಿಕ್ಕುಗಳಲ್ಲೂ ತನಿಖೆ ನಡೆಯುತ್ತಿದೆ.ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು UAPA ಅಡಿ ಬೆಂಗಳೂರಿನ ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯನ್ನು ಬೆಂಗಳೂರು ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದರು.ಇದೀಗ 2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟಕ್ಕೂ ಏನಾದರೂ ಸ್ವಾಮ್ಯತೆ ಇದೆಯೇ ಎನ್ನುವ ಚರ್ಚೆ ನಡೆದಿದೆ. ರಾಜ್ಯ ಸರ್ಕಾರ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರೂ ಪೊಲೀಸರು ಈ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ
ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ರೂವಾರಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮೊಹಮ್ಮದ್ ಶಾರಿಖ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಈ ಕುಕ್ಕರ್ ಬಾಂಬ್ ಸ್ಪೋಟದ ರೂವಾರಿಯಾಗಿರುವದುದರಿಂದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಾರಿಕ್ನ ತೀವ್ರ ವಿಚಾರಣೆ ನಡೆಸಿದ್ದಾರೆ. ಶಾರಿಕ್ ಕಡೆಯಿಂದ ಪೊಲೀಸರಿಗೆ ಉಪಯುಕ್ತ ಆಗುವ ಉತ್ತರಗಳೇನು ಸಿಕ್ಕಿಲ್ಲ ಎಂಬ ಮಾಹಿತಿ ತಿಳಿದಿದೆ.
ಈ ನಡುವೆ ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ, ಬಳ್ಳಾರಿ, ಬೆಂಗಳೂರು ಸೇರಿದಂತೆ ಹಲವೆಡೆ ಬಂಧಿತರಾಗಿರುವ ಶಂಕಿತ ಉಗ್ರರಿಗೆ ಸೂಚನೆ ನೀಡುತ್ತಾ ಉಗ್ರ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದ ವ್ಯಕ್ತಿ ಇದೇ ಕರ್ನಲ್ ಎನ್ನಲಾಗಿದೆ ಈ ಕೃತ್ಯದ ಹಿಂದೆ ಇದೇ ಹ್ಯಾಂಡ್ಲರ್ ಕರ್ನಲ್ ಇದ್ದಾನೆಂದು ಹೇಳಲಾಗುತ್ತಿದೆ.ರಾಜ್ಯದ ಸುಮಾರು 50ಕ್ಕೂ ಅಧಿಕ ಯುವಕರು ಕರ್ನಲ್ ಜೊತೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಮನಪರಿವರ್ತನೆಯಾಗಿ ಯಾವುದೇ ರೀತಿಯ ಉಗ್ರ ಕೃತ್ಯ ಎಸಗಲು ಸಜ್ಜಾಗಿರುವ ಯುವಕರು ಎನ್ನಲಾಗಿದೆ. ಟೆಲಿಗ್ರಾಂ, ವಿಕ್ಕರ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ಅವರೊಂದಿಗೆ ಸಂಪರ್ಕ ಹೊಂದಿರುವ ಕರ್ನಲ್ ಯಾರು ಯಾವಾಗ ಯಾವ ಕೃತ್ಯ ನಡೆಸಬೇಕು ಎನ್ನುವ ಪ್ಲ್ಯಾನ್ ಮಾಡುತ್ತಾನೆ ಎನ್ನಲಾಗಿದೆ. ಆದರೆ ಈ ಕರ್ನಲ್ ಯಾರು, ಎಲ್ಲಿದ್ದಾನೆ ಅನ್ನೋದು ಮಾತ್ರ ಸಂಪರ್ಕದಲ್ಲಿರುವ ಯುವಕರಿಗೆ ಗೊತ್ತಿಲ್ಲ ಎನ್ನಲಾಗಿದೆ. ಆತನನ್ನು ಪತ್ತೆ ಹಚ್ಚಿದರೆ ಎಲ್ಲ ಉಗ್ರ ಕೃತ್ಯಗಳ ಹಿನ್ನೆಲೆ ಬಯಲಾಗಲಿದೆ ಎಂಬುದು ಬಲ್ಲ ಮೂಲಗಳಿಂದ ಮಾಹಿತಿ.


