ಬೆಂಗಳೂರು : ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲದ ಪ್ರಮಾಣ 8,24,389 ಕೋಟಿ ರೂಪಾಯಿಗಳಾಗಲಿವೆ. ಸಾಲದ ಮೂಲ ಮೊತ್ತ ಬಡ್ಡಿಯಾಗಿ ಈ ವರ್ಷ ಕರ್ನಾಟಕವು 34,316 ಕೋಟಿ ರೂಪಾಯಿ ಪಾವತಿಸಲಿದೆ. ಈ ಆರ್ಥಿಕ ವರ್ಷದಲ್ಲಿ 1.32 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ರಾಜ್ಯ ಮಾಡುವ ಅಂದಾಜಿದೆ. ವಿತ್ತೀಯ ಕೊರತೆಯ ಬಜೆಟ್‌ನ ಗಾತ್ರ 4.48 ಲಕ್ಷ ಕೋಟಿ. ಕಳೆದ ಬಾರಿ ಸಿದ್ಧರಾಮಯ್ಯ 4.9 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದರು. ಈ ಬಾರಿ ಗಾತ್ರ ಮತ್ತೆ ಹಿಗ್ಗಿದೆ. 97,449 ಕೋಟಿ ವಿತ್ತೀಯ ಕೊರತೆಯನ್ನು ನಿರೀಕ್ಷಿಸಲಾಗಿದ್ದರೆ, 22,957 ಕೋಟಿ ರಾಜಸ್ವ ಕೊರತೆಯನ್ನು
ಅಂದಾಜಿಸಲಾಗಿದೆ.
ವಿತ್ತೀಯ ಕೊರತೆಯ ಒಟ್ಟು ಪ್ರಮಾಣ ಶೇ 2.95. ಸಾಲದ ಪ್ರಮಾಣ ಶೇ 24.94. ಎರಡೂ ಕಾಯ್ದೆಯ ಮಿತಿಯಲ್ಲಿವೆ ಎಂದು ಸಿಎಂ ಬಜೆಟ್‌ನಲ್ಲಿ ವಿವರಿಸಿದ್ದಾರೆ. ಜಿಡಿಪಿ ವೃದ್ಧಿ ಶೇ.8.1: ರಾಜ್ಯದ ಆರ್ಥಿಕ ಸ್ಥಿತಿ ಸಮಾಧಾನಕರವಾಗಿದ್ದು, ಕರ್ನಾಟಕದ ಆಂತರಿಕ ಉತ್ಪನ್ನ ದರ (ಜಿಎಸ್‌ಡಿಪಿ) ಶೇ.8.1ರಷ್ಟು ನೈಜ ಬೆಳವಣಿಗೆಯನ್ನು ದಾಖಲಿಸಿದೆ. ಇದು ದೇಶದ ಜಿಡಿಪಿಗಿಂತ ಹೆಚ್ಚು. ಪ್ರಸಕ್ತ ಭಾರತದ ಜಿಡಿಪಿ ಶೇ.7.4 ರಷ್ಟಿದೆ. ಉತ್ತಮ ಮುಂಗಾರಿನಿಂದಾಗಿ ಕೃಷಿ ಕ್ಷೇತ್ರದಲ್ಲಿ ಶೇ.9.1, ಕೈಗಾರಿಕಾ ವಲಯದಲ್ಲಿ ಶೇ 6.7 ಹಾಗೂ ಸೇವಾ ವಲಯದಲ್ಲಿ ಶೇ 8.1ರಷ್ಟು ಬೆಳವಣಿಗೆ ದಾಖಲಾಗಿದೆ.
2025-26ರ ಮೊದಲರ್ಧದಲ್ಲಿ ರಾಜ್ಯದಲ್ಲಿ 9.4 ಬಿಲಿಯನ್ ಅಮೇರಿಕನ್ ಡಾಲರ್‌ನಷ್ಟು ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಇದು ಕಳೆದ ವರ್ಷಕ್ಕಿಂತ ದುಪ್ಪಟ್ಟು (2.6) ಹಾಗೂ ದೇಶದ ಒಟ್ಟು ವಿದೇಶಿ ಒಳಹರಿವಿನ ಶೇ.26.7ರಷ್ಟು. ಮಹಾರಾಷ್ಟç, ಗುಜರಾತ್ ಮತ್ತು ದೆಹಲಿಯಂತಹ ಪ್ರಮುಖ ರಾಜ್ಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗಿದ್ದರೆ, ಕರ್ನಾಟಕದಲ್ಲಿ ಇದು ಹೆಚ್ಚಿರುವುದು ಗಮನಾರ್ಹ. ನೂತನ ಕೈಗಾರಿಕಾ ನೀತಿ ಜಾರಿಗೆ ಬಂದಿರುವುದರಿAದ ಇನ್ನೂ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿತ್ತೀಯ ಕೊರತೆ ಶೇ.3ರ ಒಳಗೆ ಕೇಂದ್ರದಿAದ ತೆರಿಗೆ ಪಾಲಿನ ಕಡಿತ ಹಾಗೂ ಜಿಎಸ್‌ಟಿ ಕೊರತೆಯ ಹೊರತಾಗಿಯೂ ರಾಜ್ಯ ವಿತ್ತೀಯ ಶಿಸ್ತನ್ನು ಪಾಲಿಸಿದೆ. ಕಾಯ್ದೆಯ ಪ್ರಕಾರ ಕೊರತೆ ಪ್ರಮಾಣವು ಜಿಎಸ್‌ಡಿಪಿಯ ಶೇ.3 ಒಳಗೆ ಇರಬೇಕು. ಹಾಗೂ ಸಾಲದ ಪ್ರಮಾಣವು ಜಿಎಸ್‌ಡಿಪಿಯ ಶೇ 25ರ ಒಳಗೆ ನಿರ್ವಹಣೆಯಾಗಿರಬೇಕು. ಎರಡನ್ನೂ ಪಾಲಿಸಲಾಗಿದೆ ಎಂಬುದು ಬಜೆಟ್‌ನ ವಿವರಣೆ. ವಿತ್ತೀಯ ಶಿಸ್ತಿನ ಪಾಲನೆ ಜತೆ ದೀರ್ಘಾವಧಿ ಆರ್ಥಿಕ ಸ್ಥಿರತೆಗೆ ಬದ್ಧವಾಗಿರುವುದಾಗಿ ಎಂದು ಸಿಎಂ ಘೋಷಿಸಿದ್ದಾರೆ.
೬೫ ಸಾವಿರ ಕೋಟಿ ರೂ. ರಾಜ್ಯ ತೆರಿಗೆ ಪಾಲು ನಷ್ಟ
ಹದಿನೈದನೇ ಹಣಕಾಸು ಆಯೋಗದ ಆರು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ 65 ಸಾವಿರ ಕೋಟಿ ರೂಪಾಯಿ ತೆರಿಗೆ ಪಾಲು ನಷ್ಟವಾಗಿದೆ. ಇದಲ್ಲದೇ ಆಯೋಗವೇ ಕರ್ನಾಟಕಕ್ಕೆ ನೀಡುವಂತೆ ಶಿಫಾರಸು ಮಾಡಿದ್ದ 5,495 ಕೋಟಿ ರೂಪಾಯಿಗಳ ವಿಶೇಷ ಅನುದಾನ ಮತ್ತು 6 ಸಾವಿರ ಕೋಟಿ ರೂಪಾಯಿಗಳಷ್ಟು ರಾಜ್ಯಕ್ಕೆ ನಿಯಮಾನುಸಾರ ನಿಗದಿಗೊಂಡಿದ್ದ ಕೇಂದ್ರದ ಅನುದಾನಗಳನ್ನೂ ಕೊಡಲಿಲ್ಲ ಎಂದು ಸಿಎಂ ಬಜೆಟ್‌ನಲ್ಲಿ ಕಿಡಿಕಾರಿದ್ದಾರೆ. ಹದಿನಾಲ್ಕನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ 4.713ರಷ್ಟು ತೆರಿಗೆ ಹಂಚಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಆದರೆ ಹದಿನೈದನೇ ಹಣಕಾಸು ಆಯೋಗದ ಅವಧಿಯಲ್ಲಿ ಇದು ಪಾಲನೆಯಾಗಲಿಲ್ಲ. ಬದಲಿಗೆ ಶೇ 3.647ಕ್ಕೆ ಇಳಿಕೆಯಾಯಿತು.
ಒಂದು ಸಮಾದಾನ: ಅನುದಾನ ವಿಷಯವಾಗಿ ಕೇಂದ್ರದ ಟೀಕೆಯ ನಡುವೆಯೂ 16ನೇ ಹಣಕಾಸು ಆಯೋಗ ರಾಜ್ಯಕ್ಕೆ ಶೇ.4.131ರಷ್ಟು ತೆರಿಗೆ ಪಾಲನ್ನು ಶಿಫಾರಸು ಮಾಡಿರುವುದು’ ಸಮಾಧಾನಕರ. `ಇದು ಹದಿನೈದನೇ ಹಣಕಾಸು ಆಯೋಗದ ಶಿಫಾರಸಿಗಿಂತ ಶೇ. 13ರಷ್ಟು ಹೆಚ್ಚಳವಾಗಿದೆ. ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಇದರಿಂದ ಭಾಗಶಃ ಪರಿಹರಿಸಿದಂತೆ ಆಗಿದೆ’ ಎಂದಿದ್ದಾರೆ.


