ಬೆಂಗಳೂರು : ರಾಜ್ಯದ ನ್ಯಾಯಾಲಯಗಳಲ್ಲಿ ಇ-ಮೇಲ್ ಮೂಲಕ ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡುವುದಕ್ಕೆ ಅವಕಾಶ ಕಲ್ಪಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಇ-ಮೇಲ್ ಮೂಲಕ ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡುವ ಸಂಬಂಧ ಅನುಮೋದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಅನಿರುದ್ಧ ಸುರೇಶ್ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲರು, ಇ-ಮೇಲ್ ಮೂಲಕ ಸಮನ್ಸ್ ಹಾಗೂ ನೋಟಿಸ್ ಜಾರಿ ಸಂಬಂಧದ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಈ ಸಂಬAಧಿಸಿದ ಸರ್ಕಾರ ಫೆಬ್ರವರಿ 17 ರಂದು ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟ ಮಾಡಿದೆ. ಇನ್ನು ಮುಂದೆ ಇ – ಮೇಲ್ ಮೂಲಕ ನೋಟಿಸ್, ಸಮನ್ಸ್ ಜಾರಿಗೆ ಅವಕಾಶ ಸಿಗಲಿದೆ ಎಂದು ತಿಳಿಸಿದರು. ಇದನ್ನು ದಾಖಲಿಸಿಕೊಂಡ ಪೀಠ, ಅರ್ಜಿ ಇತ್ಯರ್ಥ ಮಾಡಿ ಆದೇಶಿಸಿತು.


