ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೊಸ ತಳಿ ಜೆಎನ್. ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶೇ 50% ಕ್ಕೂ ಹೆಚ್ಚು ಒಮಿಕ್ರಾನ್ ರೂಪಾಂತರಿ JN.1 ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜನವರಿ 2ರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಶುರು ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ ಉಚಿತ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಕೊರೊನಾ JN.1 ರೂಪಾಂತರಿ ಹಾವಳಿ ಹಿನ್ನಲೆ ಆರೋಗ್ಯ ಇಲಾಖೆ ವ್ಯಾಕ್ಸಿನ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಕೋವಿಡ್ ಸಾವು ತಡೆಯಲು ವ್ಯಾಕ್ಸಿನ್ ಅಸ್ತ್ರ ಪ್ರಯೋಗ
ಈಗಾಗಲೇ ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಡೋಸ್ 100% ವ್ಯಾಕ್ಸಿನೇಶನ್ ಮಾಡಲಾಗಿದೆ. ಆದರೆ ಪ್ರಿಕಾಶನರಿ ಮುನ್ನೆಚ್ಚರಿಕಾ ವ್ಯಾಕ್ಸಿನ್ ಮಾತ್ರ ಶೇ 27% ಜನರು ಮಾತ್ರ ಪಡೆದಿದ್ದಾರೆ. ಸದ್ಯ ರಾಜ್ಯದಲ್ಲಿ ಇನ್ನು 1.5 ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ವ್ಯಾಕ್ಸಿನ್ ಪಡೆಯಲು ಅಹರ್ತೆ ಪಡೆದಿದ್ದಾರೆ. 1.5 ಕೋಟಿಗೂ ಹೆಚ್ಚು ಜನರು ಮೂರನೇ ಡೋಸ್ ವ್ಯಾಕ್ಸಿನ್ ತಗೆದುಕೊಂಡಿಲ್ಲ. ಹೀಗಾಗಿ ಈಗ ಮತ್ತೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ 30 ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ನಿರ್ಧರಿಸಿದೆ.
ಸದ್ಯ 15,800 ಲಸಿಕೆ ಈಗಾಗಲೇ ಖರೀದಿ ಮಾಡಲಾಗಿದೆ. ಇಂದಿನಿಂದಲೇ ಲಸಿಕೆಗಳನ್ನ ರಾಜ್ಯದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ವ್ಯಾಕ್ಸಿನ್ ನೀಡಲು ಪ್ಲಾನ್ ಮಾಡಿದೆ. ಹೀಗಾಗಿ ಈಗ ಮತ್ತೆ ಯಾರು ಲಸಿಕೆ ಪಡೆದಿಲ್ಲ ಅವರೆಲ್ಲ ಮುನ್ನೆಚ್ಚರಿಕಾ ದೃಷ್ಠಿಯಿಂದ ವ್ಯಾಕ್ಸಿನ್ ಪಡೆಯುವಂತೆ ಸೂಚಿಸಿದೆ. ಕೋಮಾರ್ಬಿಟಿಸ್ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮೂರನೇ ಡೋಸ್ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.


