ಬೆಂಗಳೂರು ; ಇತ್ತೀಚೆಗೆ ಬೆಂಗಳೂರು ಬಗ್ಗೆ ನೆರೆ ರಾಜ್ಯದ ಉದ್ಯಮಿಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೆ, ಜರ್ಮನ್ ಮೂಲದ ಮರ್ಸಿಡಿಸ್ ಬೆಂಜ್ ಸಿಇಒ ಓಲಾ ಕೆಲೆನಿಯಸ್ ಬೆಂಗಳೂರು ಬಗ್ಗೆ ಹೊಗಳಿದ್ದಾರೆ. ಬೆಂಗಳೂರಿಗೆ ಪ್ರತಿ ಬಾರಿ ಭೇಟಿ ನೀಡಿದಾಗಲೂ ದುಪ್ಪಟ್ಟು ಶಕ್ತಿ ಬರುತ್ತದೆ ಎಂದು ನಗರದ ಬಗ್ಗೆ ಮುಕ್ತಕಂಠದಿAದ ಶ್ಲಾಘಿಸಿದ್ದಾರೆ.
ಗ್ಲೋಬಲ್ ಡೈಲಾಗ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮರ್ಸಿಡಿಸ್ ಬೆಂಜ್ ಸಿಇಒ, ವಿಶ್ವದಾದ್ಯಂತ ಹೊಸ ಪ್ರತಿಭೆಗಳನ್ನು ಸ್ವೀಕರಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಪ್ರತಿ ಬಾರಿ ನಾನು ಬೆಂಗಳೂರಿಗೆ ಹೋದಾಗ, ನಾನು ದುಪ್ಪಟ್ಟು ಶಕ್ತಿಯೊಂದಿಗೆ ಹಿಂತಿರುಗುತ್ತೇನೆ. ನಾನು ಜರ್ಮನಿಗೆಂದೂ ಹೋಗದ, ಆದರೆ ನಿರರ್ಗಳವಾಗಿ ಜರ್ಮನ್ ಮಾತನಾಡುವ ಜನರನ್ನು ಭೇಟಿಯಾಗುತ್ತೇನೆ. ಅಂತಹ ಪ್ರತಿಭೆ ಎಲ್ಲಿದೆಯೋ ನಾವು ಅಲ್ಲಿಗೆ ಹೋಗುತ್ತೇವೆ ಎಂದು ಕೆಲೆನಿಯಸ್ ಹೇಳಿದ್ದಾರೆ.
ಜಾಗತಿಕ ಸಿಇಒಗಳು ಕರ್ನಾಟಕವನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಮರ್ಸಿಡಿಸ್ ಮುಖ್ಯಸ್ಥರ ಹೇಳಿಕೆಯೇ ಸಾಕ್ಷಿ ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಬರೆದುಕೊಂಡಿರುವ ಪ್ರಿಯಾAಕ್ ಖರ್ಗೆ, ಬೆಂಗಳೂರು ಕೇವಲ ಐಟಿ ಸೇವೆಗಳ ಕೇಂದ್ರ ಎಂಬ ಹೆಸರಿನಿಂದ ಬಹಳ ದೂರ ಸಾಗಿ, ಆವಿಷ್ಕಾರ ಆಧಾರಿತ ಬೆಳವಣಿಗೆಯ ಹೃದಯವಾಗಿದೆ. ನಮ್ಮ ಟೆಕ್ ಪರಿಸರ ವ್ಯವಸ್ಥೆಯು ಇಂದು ವೆಚ್ಚದ ಮೇಲೆ ಸ್ಪರ್ಧಿಸುತ್ತಿಲ್ಲ, ಬದಲಾಗಿ ಸಾಮರ್ಥ್ಯದ ಮೇಲೆ ಸ್ಪರ್ಧಿಸುತ್ತಿದೆ. ಮೌಲ್ಯಮಾಪನದ ಬದಲಾಗಿ, ಮೌಲ್ಯದ ಮೇಲೆ ಸ್ಪರ್ಧಿಸುತ್ತಿದೆ. ಜಾಗತಿಕ ನಾಯಕರನ್ನು ಇಲ್ಲಿಗೆ ಸೆಳೆಯುತ್ತಿರುವುದು ಕಡಿಮೆ ವೆಚ್ಚದ ಮಾನವಶಕ್ತಿಯಲ್ಲ, ಬದಲಾಗಿ ಆಳವಾದ ತಾಂತ್ರಿಕ ಪರಿಣತಿ ಎಂದು ವಿವರಿಸಿದ್ದಾರೆ.
ಅಲ್ಲದೆ, ಬೆಂಗಳೂರು ಈಗ ತಂತ್ರಜ್ಞಾನ ಪ್ರತಿಭೆಗಳನ್ನು ಸೆಳೆಯುವುದರಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಏಷ್ಯಾ ಪೆಸಿಫಿಕ್ (ಎಪಿಎಸಿ) ವಲಯದಲ್ಲಿ ಕೌಶಲ್ಯಯುತ ಪ್ರತಿಭೆಗಳಿಗೆ ಉನ್ನತ ತಾಣವಾಗಿ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕೋಟ್ಯಂತರ ಜನರು ಭಾರತದತ್ತ ನೋಡುತ್ತಿರುವಾಗ, ನಗರವು ನಾವೀನ್ಯತೆಯ ಮುಂದಿನ ಅಲೆಯನ್ನು ಮುನ್ನಡೆಸುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.
ವಿಶ್ವದ ಶೇ. ೩೬ರಷ್ಟು ತಾಂತ್ರಿಕ ಪ್ರತಿಭೆಗಳು ಅಮೆರಿಕ ಮತ್ತು ಭಾರತದಲ್ಲಿ ಕೇಂದ್ರೀಕೃತವಾಗಿವೆ. ನಮ್ಮ ನಗರವು ಕೇವಲ ಕಾರ್ಯಗತಗೊಳಿಸುವವರನ್ನು ಮಾತ್ರವಲ್ಲದೆ, ಜಗತ್ತಿಗಾಗಿ ಯೋಚಿಸುವ, ನಿರ್ಮಿಸುವ ಮತ್ತು ಪರಿಹರಿಸುವ ಜನರಿಂದ ನಾವೀನ್ಯತೆಯ ಮುಂದಿನ ಅಲೆಯನ್ನು ಮುನ್ನಡೆಸುತ್ತಿದೆ. ಜಾಗತಿಕ ಸಿಇಒಗಳು ನಾಳಿನ ತಂತ್ರಜ್ಞಾನಗಳನ್ನು ನಿರ್ಮಿಸಲು ಕರ್ನಾಟಕವನ್ನು ತಮ್ಮ ನೆಲೆಯಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನದ ಕೇಂದ್ರ ಎAದು ಬಣ್ಣಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬೆಂಗಳೂರು ಕೌಶಲ್ಯಯುತ ಪ್ರತಿಭೆಗಳಿಗೆ ಉನ್ನತ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ. ಜಾಗತಿಕ ನಾಯಕರು ಕರ್ನಾಟಕದತ್ತ ಏಕೆ ಆಕರ್ಷಿತರಾಗುತ್ತಿದ್ದಾರೆ ಎಂಬುದನ್ನು ವಿವರಿಸಲು ಸಚಿವರು ಮರ್ಸಿಡಿಸ್ ಬೆಂಜ್ ಸಿಇಒ ಓಲಾ ಕೆಲೆನಿಯಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.


