ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಳ ಇಲಾಖೆಯಲ್ಲಿನ ಹಗರಣ ಸೇರಿದಂತೆ ಒಟ್ಟಾರೆ ಈ ಸರ್ಕಾರದ ಎಲ್ಲ ಹಗರಣಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ನಗರದಲ್ಲಿ ಗುರುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಹಗರಣಗಳ ವಿರುದ್ಧ ಬಿಜೆಪಿ ಉಗ್ರ ಸ್ವರೂಪದ ಹೋರಾಟ ಮಾಡಲಿದೆ ಎಂದರು. 2025 ರ ಜನವರಿ ಮತ್ತು ಫೆಬ್ರುವರಿ ತಿಂಗಳ ‘ಗೃಹಲಕ್ಷ್ಮಿ’ ಯೋಜನೆಯ ಎರಡು ಕಂತುಗಳಿಗೆ ಮೀಸಲಾದ ಸುಮಾರು ೫ ಸಾವಿರ ಕೋಟಿ ರೂಪಾಯಿ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ. ಈ ಬಗ್ಗೆ ವಿಧಾನಮಂಡಲದಲ್ಲಿ ಕೇಳಿದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.
“ಹಣಕಾಸು ಖಾತೆಯನ್ನೂ ವಹಿಸಿಕೊಂಡಿರುವ ಮುಖ್ಯಮಂತ್ರಿ ಅವರಿಗೆ ಗೃಹಲಕ್ಷ್ಮಿ ಯೋಜನೆಯ ನಿಧಿ ಸ್ಥಿತಿ ಕುರಿತು ಉತ್ತರಿಸಲು ಸಾಧ್ಯವಾಗಿಲ್ಲ.
ಫಲಾನುಭವಿಗಳಿಗೆ ಹಣ ತಲುಪದಿರುವುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು” ಎಂದು ಒತ್ತಾಯಿಸಿದರು. ತಮ್ಮ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು. `ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನಕ್ಕಾಗಿ ಕಾಂಗ್ರೆಸ್ ಶಾಸಕರು ಗೋಗರೆಯುತ್ತಿದ್ದಾರೆ. ಗಂಗಾ ಕಲ್ಯಾಣ ಯೋಜನೆಗೆ, ಮನೆ ನಿರ್ಮಾಣಕ್ಕೆ, ಅನುಗ್ರಹ ಯೋಜನೆಗೆ ಹಣ ಸಿಗುತ್ತಿಲ್ಲ. ಆದರೆ ವಿದೇಶ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ” ಎಂದು ಅವರು ಟೀಕಿಸಿದರು.


