ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ದಿನನಿತ್ಯ ತಿನ್ನುವ ತಿಂಡಿ ತಿನಿಸುಗಳಿಗೆ ಕಲರ್ (ಬಣ್ಣ ) ಹಾಕುವುದು ಹೆಚ್ಚಾಗುತ್ತಿದ್ದು ಇದು ಮನುಷ್ಯನ ಆರೋಗ್ಯಕ್ಕೆ ಬಹಳ ಪರಿಣಾಮ ಉಂಟುಮಾಡಿದೆ ಎಂದು ತಜ್ಞರು ಸರಕಾರಕ್ಕೆ ತಿಳಿಸಿದ್ದಾರೆ. ಕಾಟನ್ ಕ್ಯಾಂಡಿ ಆಯ್ತು. ಗೋಬಿ ಮಂಚೂರಿಯೂ ಆಯ್ತು. ಈಗ ರಾಜ್ಯದಲ್ಲಿ ಕಬಾಬ್ ಸರದಿ. ಚಿಕನ್, ಫಿಶ್ ಹಾಗೂ ವೆಜ್ ಕಬಾಬ್ಗೆ ಇನ್ಮುಂದೆ ಕಲರ್ ಬಳಕೆ ಮಾಡುವಂತಿಲ್ಲ. ಕಲರ್ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ. ಕಬಾಬ್ ತಯಾರಿಕೆಯಲ್ಲಿ ಬಳಸುವ ಕಲರ್ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಬಾಬ್ಗೆ ಕಲರ್ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ.
ಫಿಶ್ ಸೇರಿದಂತೆ ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.
ಕೃತಕ ಬಣ್ಣ ನಿಷೇಧಕ್ಕೆ ಕಾರಣವೇನು?
ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಹಿಂದೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿತ್ತು.
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನ FSSAI ಸಂಗ್ರಹಿಸಿದ್ದು, ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಾದರಿ ಟೆಸ್ಟ್ ಮಾಡಲಾಗಿದೆ. ಟೆಸ್ಟಿಂಗ್ ವೇಳೆ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಇರೋದು ಪತ್ತೆಯಾಗಿತ್ತು.
ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್-ಬಿ ರಾಸಾಯನಿಕ ಅಂಶ ಪತ್ತೆಯಾಗಿದ್ರೆ, ಇತ್ತ ಗೋಬಿ ಮಂಚೂರಿಯಲ್ಲಿ ಸನ್ಸೆಟ್ ಯೆಲ್ಲೊ ಬಣ್ಣ ಮತ್ತು ಟಾಟ್ರ್ರಾಜಿನ್ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್ಸೆಟ್ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರ್ರಾಜಿನ್’ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಲರ್ ಬಳಕೆಯನ್ನು ನಿಷೇಧಿಸಿದೆ.
ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


