ಬೆಂಗಳೂರು : ರಾಜ್ಯದ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಬಿಸಿ ಗಾಳಿ ಬೀಸಲಿದ್ದು ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ಹವಾಮಾನ ಇಲಾಖೆ ಜನರನ್ನು ಎಚ್ಚರಿಸಿದೆ.
ಮುಂದಿನ ಮೊದಲ ಮತ್ತು ಎರಡನೆ ವಾರದಲ್ಲಿ ಬಿಸಿ ಗಾಳಿಯ ಪರಿಣಾಮ ರಾಜ್ಯಕ್ಕೆ ತಟ್ಟಲಿದೆ. ಈಗಾಗಲೇ ಬರಗಾಲ,ಜಲಕ್ಷಮಕ್ಕೆ ತತ್ತರಿಸಿರುವ ರಾಜ್ಯಕ್ಕೆ ಮತ್ತೊಂದು ಆಘಾತ ಇದಾಗಿದೆ. ಚಿತ್ರದುರ್ಗ,ದಾವಣಗೆರೆ ತುಮಕೂರು,ಚಿಕ್ಕಬಳ್ಳಾಪುರ ಕೋಲಾರ,ಮಂಡ್ಯ,ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗು ಚಾಮರಾಜನಗರದಲ್ಲಿ ಬಿಸಿ ಗಾಳಿ ಇರಲಿದೆ.ಬೆಂಗಳೂರಿನಲ್ಲಿ ಬುಧವಾರ 37.7ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಗುರುವಾರ ಬರೋಬ್ಬರಿ 35 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ ಮಾತ್ರವಲ್ಲದೇ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆದ್ರತೆಯ ಪರಿಸ್ಥಿತಿಗಳು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಉತ್ತರ ಕರ್ನಾಟಕದ ಬೆಳಗಾವಿ,ಧಾರವಾಡ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಮುಂದಿನ 5 ದಿನಗಳಲ್ಲಿತಾಪಮಾನವು 2 ಡಿಗ್ರಿ ಸೆಲ್ಸಿಯಸ್?ಗೆ ಏರಲಿವೆ. ರಾಯಚೂರು ಮತ್ತು ಕಲ್ಬುರ್ಗಿಯಲ್ಲಿ ರಾತ್ರಿ ವೇಳೆ ಕೂಡ ಬಿಸಿ ಇರಲಿದೆ.
ಚಿತ್ರದುರ್ಗ, ದಾವಣಗೆರೆ, ಕೋಲಾರ, ಬೆಂಗಳೂರು ನಗರ, ಹಾಸನ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದೇಹದ ಉಷ್ಣತೆಯು 40 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ ಎಂದು ಇಲಾಖೆ ಎಚ್ಚರಿಸಿದೆ. ಹೈ ಬಿಪಿ, ಹೃದಯ ಸಂಬಂದಿ ಕಾಯಿಲೆಗಳು, ಗರ್ಭೀಣಿಯರು, ವೃದ್ಧರು ಮತ್ತು ಮಕ್ಕಳು ಬಿಸಿಲಿನಲ್ಲಿ ಒಡಾಡಬಾರದು. ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇದ್ದು ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದೆ.


