Saturday, March 14, 2026
Flats for sale
Homeರಾಜಕೀಯಬೆಂಗಳೂರು ; ಗುತ್ತಿಗೆದಾರನಿಗೆ ಜೀವ ಬೆದರಿಕೆ ; ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌...

ಬೆಂಗಳೂರು ; ಗುತ್ತಿಗೆದಾರನಿಗೆ ಜೀವ ಬೆದರಿಕೆ ; ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು.

ಬೆಂಗಳೂರು ; ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಕೇಸು ದಾಖಲಿಸುವ ಪ್ರಕರಣ ಹೆಚ್ಚಾಗುತ್ತಿದ್ದು ಬಿಜೆಪಿ ವಿರುದ್ಧ ದ್ವೇಷರಾಜಕಾರಣ ಮಾಡುತ್ತಿದೆಂದು ಹಲವು ಶಾಸಕರು ಆಕ್ರೋಶ ಹೊರಹಾಕಿದ್ದಾರೆ.ಇದೀಗ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ತಮ್ಮ ಮೇಲೆ ದೌರ್ಜನ್ಯ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಆರೋಪಿಸಿದ್ದಾರೆ. ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್​ಐಆರ್​ ದಾಖಲಾಗಿವೆ. ಮುನಿರತ್ನ ಅವರಿಗೆ ನೋಟಿಸ್ ನೀಡಲು ವೈಯಾಲಿಕಾವಲ್ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಎ1 ಶಾಸಕ ಮುನಿರತ್ನ ಆಗಿದ್ದಾರೆ. ಎ1 ಶಾಸಕ ಮುನಿರತ್ನ, ಎ2 ಆಪ್ತ ಸಹಾಯಕ ವಿಜಯ್ ಕುಮರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ.

ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದರು. ಜೊತೆಗೆ ತನಗೆ ರಕ್ಷಣ ನೀಡುವಂತೆ ಮನವಿ ಮಾಡಿದ್ದರು.ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಈ ಕುರಿತು ಮಾತನಾಡಿದ್ದು, ನನ್ನ ಕರೆಸಿ ಬೆದರಿಕೆ ಹಾಕಿ 20 ಲಕ್ಷ ರೂ. ಹಣ ಕೇಳಿದ್ದಾರೆ. ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ, ಆದರೆ ನನ್ನ ಕುಟುಂಬದ ಸಲುವಾಗಿ ಉಳಿದುಕೊಂಡಿದ್ದೇನೆ. ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ನೋಡು.. ರೇಣುಕಾಸ್ವಾಮಿಗೆ ಗತಿ ಕಾಣಿಸಿದ್ದು ನಮ್ಮ ಅಕ್ಕನ ಮಗ ಎಂದು ಬೆದರಿಕೆ ಹಾಕಿದ್ದರಂತೆ. ನನ್ನ ಬಳಿ ನಿನ್ನನ್ನು ಮುಗಿಸಲು ನೂರು ಪ್ಲ್ಯಾನ್ ಇದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ವೈಯ್ಯಾಲಿಕಾವಲ್ ಪೊಲೀಸರಿಂದ‌ ಮುನಿರತ್ನಗಾಗಿ ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮುನಿರತ್ನ ಮನೆ ಬಳಿ ಪೊಲೀಸ್ ಭದ್ರತೆ ನೀಡಲಾಗಿದೆ. ಪ್ರತಿಭಟನೆ ಕೂಡ‌ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲೂ ಒಂದು ಕೆಎಸ್ಆರ್ಪಿಸಿ ತುಕಡಿ ನಿಯೋಜನೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular