ಬೆಂಗಳೂರು : ಕ್ರಿಸ್ಮಸ್ , ಹೊಸವರ್ಷಕ್ಕೆ ಬೆಂಗಳೂರು ಸಜ್ಜಾಗುತ್ತಿರುವ ಹೊತ್ತಿನಲ್ಲೇ ಕೋಳಿ ಮೊಟ್ಟೆ ದರ ಏರಿಕೆಯಾಗಿರುವುದು ಜನಸಾಮಾನ್ಯರಿಗೆ
ಹೊರೆಯಾಗಿದೆ.
ಸಂಡೇ ಇರಲಿ ಅಥವಾ ಮಂಡೇ ಇರಲಿ ನಿತ್ಯ ಕೋಳಿ ಮೊಟ್ಟೆ ಸೇವಿಸಿ ಎನ್ನುತ್ತಿದ್ದರು. ಇದೀಗ ಮೊಟ್ಟೆ ಖರೀದಿಸಬೇಕಾ ಅಥವಾ ಬೇಡವಾ ಎಂದು ಆಲೋಚಿಸುವಂತಾಗಿದೆ. ಏಕೆಂದರೆ ಇದೀಗ ಒಂದು ಮೊಟ್ಟೆ 7 ರಿಂದ 8 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರ ನಡುವೆ ಕ್ರಿಸ್ಮಸ್, ಹೊಸವರ್ಷ ಇರುವುದರಿಂದ ಕೇಕ್ ಉತ್ಪಾದನೆಗಾಗಿ ಮೊಟ್ಟೆ ಬೇಡಿಕೆ ಹೆಚ್ಚಾಗಿದೆ. ಆದರೆ ಪೂರೈಕೆ ಕಡಿಮೆಯಾಗಿರುವುದರಿಂದ ಮೊಟ್ಟೆಯ ದರವೂ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ನಗರದಲ್ಲಿ 5 ರಿಂದ 6.50 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದ್ದ ಮೊಟ್ಟೆ ಇದೀಗ 7 ರಿಂದ 8 ರೂಪಾಯಿಗೆ ಮಾರಾಟವಾಗುತ್ತಿದೆ. ತಮಿಳುನಾಡಿನ ನಾಮಕಲ್‌ನಿಂದ ಪ್ರತಿನಿತ್ಯ 79 ಲಕ್ಷ ಮೊಟ್ಟೆ ಪೂರೈಕೆಯಾಗುತ್ತಿತ್ತು. ಸದ್ಯ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಮೊಟ್ಟೆ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲದ ಕಾರಣ ಕೋಳಿಮೊಟ್ಟೆ ದರ ಏರಿಕೆಯಾಗಿದೆ.
ಇನ್ನು ಕೋಳಿ ಮೊಟ್ಟೆ ಜೊತೆಗೆ ಕೋಳಿ ಬೆಲೆಯೂ ಹೆಚ್ಚಾಗಿದ್ದು ಬಾಯ್ಲರ್ ಕೋಳಿ ಕೆಜಿಗೆ 150 ರೂ. ಹಾಗೂ ಫಾರಂ ಕೋಳಿ ಕೆ.ಜಿಗೆ 170 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಕೋಳಿ ಹಾಗೂ ಮೊಟ್ಟೆಯಿಂದ ಮಾಡಿದ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇನ್ನೂ ಎರಡು-ಮೂರು ತಿಂಗಳು ಕೋಳಿ, ಮೊಟ್ಟೆ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ. ಇತ್ತ ಈ ದರ ಏರಿಕೆಯು ಕ್ರಿಸ್ಮಸ್ ಕೇಕ್ ತಿನ್ನುವ ಹಾಗೂ ಖರೀದಿಸುವವ ಜೇಬಿಗೂ ಕತ್ತರಿ ಬೀಳೋದು ಗ್ಯಾರಂಟಿಯಾಗಿದೆ.


