ಬೆಂಗಳೂರು : ಐತಿಹಾಸಿಕ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಗೋಡೆಯ 3 ಅಡಿ ಪಕ್ಕದಲ್ಲೇ ಹೆದ್ದಾರಿಗೆ ಭೂಸ್ವಾಧೀನಕ್ಕೆ ಸೂಚಿಸಲಾಗಿದೆ. ಇದರ ವಿರುದ್ಧ ಆಕ್ರೋಶ ಎದ್ದು ಕೋರ್ಟ್ ಕಟಕಟೆ ಹತ್ತಿದೆ .ಇದನ್ನು ಪ್ರಶ್ನಿಸಿ ಕೊಲ್ಲೂರಿನ ಗುರುಪ್ರಸಾದ್ ಎಂಬುವರು ಪಿಐಎಲ್ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಭೂಸ್ವಾಧೀನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ಪಿ ದಳವಾಯಿ, 1,200 ವರ್ಷಕ್ಕೂ ಹಳೆಯದು ನಂಬಲಾದ ದೇವಸ್ಥಾನದ ಹಿಂಭಾಗದ ಗೋಡೆಗೆ ಸಮಾನಾಂತರವಾಗಿರುವ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲು ರಸ್ತೆ ಮತ್ತು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಯ್ದೆ, 1956 ರ ಸೆಕ್ಷನ್ 3 ಸಿ ಪ್ರಕಾರ, ಸ್ವಾಧೀನದ ವಿರುದ್ಧ ನಿವಾಸಿಗಳು ಅಕ್ಟೋಬರ್ 26, 2023 ರಂದು ಸಲ್ಲಿಸಿದ ಆಕ್ಷೇಪಣೆಗಳನ್ನು ಇನ್ನೂ ಪರಿಗಣಿಸಲಾಗಿಲ್ಲ. ಆಕ್ಷೇಪಣೆಗಳನ್ನು ಆಲಿಸಿ, ನಿರ್ಧರಿಸಿ ಮತ್ತು ತಿಳಿಸದ ಹೊರತು, ಅಧಿಕಾರಿಗಳು ಭೂಮಿಯನ್ನು ಪ್ರವೇಶಿಸುವ ಮತ್ತು ಕೆಲಸ ಪ್ರಾರಂಭಿಸುವ ಅಧಿಕಾರವನ್ನು ಚಲಾಯಿಸಲು ಅನುಮತಿಸಲಾಗುವುದಿಲ್ಲ ಎಂದು ವಾದಿಸಿದರು.
ರಾಷ್ಟ್ರೀಯ ಹೆದ್ದಾರಿ ಯೋಜನೆಯೆ ಪ್ರಕಾರ ಕಾಮಗಾರಿ ನಡೆದರೆ, ದೇವಾಲಯದ ಗೋಡೆಯ 3 ಅಡಿ ಪಕ್ಕದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಹೆದ್ದಾರಿಯಲ್ಲಿ ಪ್ರತಿದಿನ ಅಂದಾಜು ಹದಿನೈದು ಸಾವಿರ ವಾಹನಗಳು ಹಾದುಹೋಗಲಿವೆ. ಇದರಿಂದ ಸಾವಿರಾರು ವರ್ಷಗಳ ಹಳೆಯ ದೇಗುಲಕ್ಕೆ ಅಪಾಯವಿದೆ ಎಂದು ಅರ್ಜಿದಾರರ ಪರ ವಕೀಲ ವೆಂಕಟೇಶ ದಳವಾಯಿ ವಾದ ಮಂಡನೆ ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿತು.ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ ಕೋರ್ಟ್ ವಿಚಾರಣೆಯನ್ನು ಮುಂದಕ್ಕೆ ಹಾಕಿದೆ. ಈ ವಾದ ಪರಿಗಣಿಸಿದ ಪೀಠವು ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸಿದೆ.
ದೇವಾಲಯದ ಸುತ್ತಲಿನ ಭೂಸ್ವಾಧೀನವು ರಥೋತ್ಸವ ಮತ್ತು ಇತರ ಉತ್ಸವಗಳ ಆಯೋಜನೆಗೂ ತೊಂದರೆಯಾಗಲಿದೆ. ರಥಗಳನ್ನು ಜೋಡಿಸಲು, ಮಳಿಗೆಗಳನ್ನು ಸ್ಥಾಪಿಸಲು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ವಿಶಾಲವಾದ ಮೈದಾನದ ಅಗತ್ಯವಿದೆ. ಹೆದ್ದಾರಿಗಾಗಿ ಭೂಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಈ ಚಟುವಟಿಕೆಗಳಿಗೆ ಸ್ಥಳಾವಕಾಶವು ಕ್ಷೀಣಿಸುತ್ತದೆ. ಜನದಟ್ಟಣೆಗೆ ಕಾರಣವಾಗುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.


