ಬೆಂಗಳೂರು ; ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಹಾಗೂ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕಾರ್ಪೊರೇಟ್ ಕಚೇರಿಗಳಿಗಿಂತ ಭಿನ್ನ ವಾಗಿ, ಸರ್ಕಾರಿ ನೌಕರರಿಗೆ ಯಾವುದೇ ವಸ್ತçಸಂಹಿತೆ (ಡ್ರೆಸ್ ಕೋಡ್) ಇಲ್ಲ. ಹಾಗಿದ್ದೂ, ಕೆಲವು ಸಿಬ್ಬಂದಿಗಳು ಯುವಜನತೆ ಕಾಲೇಜಿಗೆ ಧರಿಸಿಕೊಂಡು ಹೋಗುವ ರೀತಿಯಲ್ಲಿ ಬಟ್ಟೆ ಧರಿಸುತ್ತಾರೆ, ಇದು ಸ್ವೀಕಾರಾರ್ಹವಲ್ಲ. ಹರಿದ ಜೀನ್ಸ್, ತೋಳಿಲ್ಲದ ಉಡುಪುಗಳು ಮತ್ತು ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸಿ ಕೊಂಡು ಬರುತ್ತಾರೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.
ಹಾಗಾಗಿ ಸರ್ಕಾರಿ ಕಚೇರಿಗಳಲ್ಲಿ ಗೌರವಯುತ ಉಡುಗೆಗಳಿರಲಿ ಎಂದು ಸುತ್ತೋಲೆ ಹೇಳಿದೆ. ಸಿಬ್ಬಂದಿ ಆಡಳಿತ ಮತ್ತು ಸುಧಾರಣಾ ಇಲಾಖೆ (ಡಿಪಿಆರ್) ವಿವಿಧ ಇಲಾಖೆಗಳ ಮುಖ್ಯಸ್ಥರು, ಉಪಆಯುಕ್ತರು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ ಈ ಸಂದೇಶವನ್ನು ಕಳುಹಿಸಿದ್ದು,ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಪಟ್ಟಿ ಮಾಡಿದೆ.
ರಾಜ್ಯ ಸರ್ಕಾರ ಚಲನಾ ರಿಜಿಸ್ಟರ್ ಮತ್ತು ನಗದು ಘೋಷಣೆ ರಿಜಿಸ್ಟರ್ ಪರಿಚಯಿಸಿದೆ. ನೌಕರರು ಕಚೇರಿ ಪ್ರವೇಶಿಸುವಾಗ, ಹೊರ ಹೋಗುವಾಗ ನಮೂದಿಸುವುದು ಕಡ್ಡಾಯವಾಗಿದೆ. ಕರ್ತವ್ಯದ ಮೇಲೆ ಹೊರಗಡೆ ಹೋಗುತ್ತಿದ್ದರೂ ರಿಜಿಸ್ಟರ್ನಲ್ಲಿ ನಮೂದಿಸಿಯೇ ಹೋಗಬೇಕು. ಕಚೇರಿಗೆ ಬರುವಾಗ ತಮ್ಮ ಹತ್ತಿರ ಇದ್ದ ಹಣ ಹಾಗೂ ಹೊರ ಹೋಗುವಾಗ ಹೋಗುವಾಗ ಇರುವ ಹಣವನ್ನೂ ರಿಜಸ್ಟರ್ ಮಾಡಬೇಕು.


