ಬೆಂಗಳೂರು : ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರ ಮೊಮ್ಮಗ, ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣ ಅವರಿಗೆ ವಿಶೇಷ ನ್ಯಾಯಾಲಯ ಅಸ್ವಾಭಾವಿಕ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸಂಸದರು/ಶಾಸಕರ ವಿಶೇಷ ನ್ಯಾಯಾಲಯ ಸೂರಜ್ ರೇವಣ್ಣ ಅವರಿಗೆ ಅಗತ್ಯವಿದ್ದಾಗ ಪ್ರಕರಣದ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಮತ್ತು ಪ್ರತಿ ಎರಡನೇ ಭಾನುವಾರದಂದು ಪೊಲೀಸ್ ಅಧಿಕಾರಿಗಳೊಂದಿಗೆ ಸಹಿ ಮಾಡುವಂತೆ ಸೂಚನೆ ನೀಡಿದೆ.
ದೂರುದಾರರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲಿ ಸಂಪರ್ಕಿಸದಂತೆಯೂ ಆದೇಶಿಸಲಾಗಿದೆ. ಸೂರಜ್ ರೇವಣ್ಣ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಬಲವಂತದ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪದ ಮೇಲೆ ಎರಡು ದೂರುಗಳನ್ನು ದಾಖಲಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸುತ್ತಿದೆ.
ಸೂರಜ್ ರೇವಣ್ಣ ಅವರ ಸಹೋದರ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದಾರೆ. ಅವರ ತಂದೆ, ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, ಸೆಕ್ಸ್ ವೀಡಿಯೋ ಹಗರಣಕ್ಕೆ ಸಂಬಂಧಿಸಿದ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದರು ಆದರೆ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕೂಡ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ.
ಜೂನ್ 23ರಂದು ಸೂರಜ್ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.