ಬನವಾಸಿ : ಆಕ್ಟೊಬರ್ 10 ರಂದು ಬನವಾಸಿಯಲ್ಲಿ ನಡೆದ ಜಿಲ್ಲಾಧಿಕಾರಿ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬನವಾಸಿಯ ಮಧುಕೇಶ್ವರ ದೇವಾಲಯದ ದುರಸ್ತಿ ಕುರಿತಂತೆ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಮನವಿ ಸಲ್ಲಿಕೆಯಾಗಿತ್ತು.
ಈ ಮನವೀಯ ಕುರಿತಂತೆ ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ಶುಕ್ರವಾರ , ಬನವಾಸಿ ಗೆ ಆಗಮಿಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳು ದೇವಾಲಯದ ಮೇಲ್ಚಾವಣಿ ಮಳೆ ನೀರಿಂದ ಸೋರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ದೇವಸ್ಥಾನದಲ್ಲಿ ಎಲ್ಲೆಲ್ಲಿ ಸೋರಿಕೆ ಇದೆ ಎಂಬ ಬಗ್ಗೆ ಸಂಪೂರ್ಣ ಸರ್ವೆ ನಡೆಸಿ ಆ ಬಗ್ಗೆ ಮಾಹಿತಿ ಕಲೆ ಹಾಕಿದೆ, ಇಲಾಖೆಯ ಡೆಪ್ಯೂಟಿ ಸುಪರಿಂಟೆಂಡೆಂಟ್ ಆರ್ಕಿಯೋಲೋಜಿಸ್ಟ್ ಇಂಜಿನಿಯರ್ ಹಾಗೂ ಹಾವೇರಿ ಉಪ ವಿಭಾಗದ ಸಿಎ ಅವರು ತಮ್ಮ ಸಿಬ್ಬಂದಿಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಸರ್ವ ಕಾರ್ಯ ನಡೆಸಿ ಧಾರವಾಡ ವಿಭಾಗ ಕಚೇರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಪುರಾತತ್ತ್ವ ಇಲಾಖೆಯ ಅಧಿಕಾರಿಗಳು ಮಧುಕೇಶ್ವರ ದೇವಸ್ಥಾನದ ಗರ್ಭ ಗುಡಿ, ಸಂಕಲ್ಪ ಮಂಟಪ, ದೊಡ್ಡ ದೊಡ್ಡ ಕಂಬಗಳ ಬಳಿ ಸೋರಿಕೆ, ತ್ರಿಲೋಕ ಮಂಟಪ ಹತ್ತಿರ, ನೃತ್ಯ ಮಂಟಪ, ನಂದಿ ಮಂಟಪ ಸುತ್ತ, ಭಕ್ತರು ಕೂಡುವ ಆಸನಗಳ ಮೇಲೆ ಸೋರಿಕೆ ಬಗ್ಗೆ ಮಾಹಿತಿ ಪಡೆದುಕೊಂಡು ಚಿತ್ರ ಸಹಿತ ವರದಿ ಮಾಡಿದ್ದಾರೆ. ಹಾಗೆಯೇ ಪ್ರಾಕಾರದ ಲಕ್ಷ್ಮಿ ನರಸಿಂಹ ದೇವಸ್ಥಾನ, ವೀರಭದ್ರ ದೇವಸ್ಥಾನ, ಅರ್ಧ ಗಣಪತಿ ದೇವಸ್ಥಾನ ಸೇರಿದಂತೆ ಇನ್ನಿತರ ಕೆಲ ದೇವಸ್ಥಾನ ಸೋರಿಕೆ ಬಗ್ಗೆ ಕೂಡ ಮಾಹಿತಿ ಪಡೆದುಕೊಂಡು ವರದಿ ಮಾಡಿದ್ದಾರೆ. ಶೀಘ್ರದಲ್ಲಿ ಅಗತ್ಯ ದುರಸ್ತಿ ಕಾರ್ಯಗಳು ಆರಂಭಗೊಳ್ಳುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥ ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.


