ಪಡುಬಿದ್ರೆ : ಖಾಸಗಿ ಬಸ್ಸಿನವರ ಕಿರಿ ಕಿರಿ ದಿನಕ್ಕೊಂದು ಇರುವುದಂತೂ ನಿಜ ಆದರೆ ಗುರುವಾರ ಮಧ್ಯಾಹ್ನ ಪಡುಬಿದ್ರಿಯಲ್ಲಿ ಸಮಯದ ವಿವಾದದ ಹಿನ್ನೆಲೆಯಲ್ಲಿ ಬಸ್ ಚಾಲಕನೊಬ್ಬ ಬಸ್ಸನ್ನು ಹೆದ್ದಾರಿಯಲ್ಲಿ ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ನಂತರ ಸಮೀಪದ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದ ಘಟನೆ ವರದಿಯಾಗಿದೆ.
ಉಡುಪಿ-ಮಂಗಳೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ಸಿನ ಸಮಯ ಪಾಲಕ ಶರತ್ ಹಾಗೂ ಚಾಲಕ ಅಜೀಜ್ ನಡುವೆ ಜಗಳ ನಡೆದಿದೆ. ಸಮಯ ಪಾಲಕರು ಬಸ್ ನಿಲ್ಲಿಸಿದಾಗ ಚಾಲಕ ಉದ್ರಿಕ್ತನಾಗಿ ರಸ್ತೆ ಮಧ್ಯದಲ್ಲಿ ಬಸ್ ನಿಲ್ಲಿಸಿ ನೇರವಾಗಿ ಸಮೀಪದ ಬಸ್ ತಂಗುದಾಣಕ್ಕೆ ತೆರಳಿದ್ದಾನೆ.ರಸ್ತೆ ಮದ್ಯೆ ಬಸ್ಸು ನಿಲ್ಲಿಸಿದ್ದರಿಂದ ವಾಹನ ಸವಾರರಿಗೆ ಅಡಚಣೆ ಉಂಟಾಗಿ ಹಲವು ಹೊತ್ತುಗಳ ಕಾಲ ಬ್ಲಾಕ್ ಉಂಟಾಯಿತು ಬಳಿಕ ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.ಇವರ ಸಮಯದ ವಿವಾದದ ನಡುವೆ ಸಾರ್ವಜನಿಕರಿಗೆ ರಸ್ತೆ ಬ್ಲಾಕ್ ಮಾಡಿ ಅಡಚಣೆ ಉಂಟುಮಾಡಿದ ವಿಡಿಯೋ ವೈರಲ್ ಆಗಿದ್ದು ಸಾಮಜಿಕ ಜಾಲತಾಣದಲ್ಲಿ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ.


