ನವದೆಹಲಿ : ಮೂರು ವರ್ಷಗಳ ಹಿಂದೆ ಕೊರೊನಾ ಸೋಂಕು ದೇಶಾದ್ಯಂತ ಭಾರಿ ಆತಂಕ ಸೃಷ್ಟಿಸಿದ ನಂತರ ತಣ್ಣಗಾಗಿದ್ದ ಮಹಾಮಾರಿ ಮತ್ತೆ ತಲೆಎತ್ತಿದೆ.
ಕಳೆದ 24 ಗಂಟೆಯಲ್ಲಿ 339 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾದ ರೂಪಾಂತರಿ ಜೆಎನ್ 1 ಕೇರಳದ ವೃದ್ಧೆಯೊಬ್ಬರಲ್ಲಿ ಪತ್ತೆಯಾದ ಬಳಿಕ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಅಮೆರಿಕದಲ್ಲಿ ಪತ್ತೆಯಾಗಿದ್ದ ಈ ರೂಪಾಂತರಿ ಡಿ. 8 ರಂದು ಕೇರಳದಲ್ಲಿ ಪತ್ತೆಯಾಗಿದೆ.
ವಿಕಾಸ ಸೌಧದಲ್ಲಿ ತುರ್ತುಸಭೆ: ಕೋವಿಡ್ನ ಉಪತಳಿ ಜೆಎನ್-1 ಗೆ ಕೇರಳದಲ್ಲಿ ಇಬ್ಬರು, ಆಂಧ್ರದಲ್ಲಿ ಒಬ್ಬರು ಬಲಿಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ.
ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ತುರ್ತು ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚಿಸಿದ್ದಾರೆ.
ಯಾವುದೇ ಕಾರಣಕ್ಕೆ ಅಧಿಕಾರಿಗಳು, ಸಾರ್ವಜನಿಕರು ನಿರ್ಲಕ್ಷö್ಯ ಮಾಡಬಾರದು. ಈಗಿನಿಂದಲೇ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ತಯಾರಿ ಮಾಡಿಕೊಳ್ಳಬೇಕು. ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡುವುದು, ಅಗತ್ಯ ಸಿಬ್ಬಂದಿ ಇರುವಂತೆ ನೋಡಿಕೊಳ್ಳುವುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಅಂತಹ ವಾತಾವರಣ ಇಲ್ಲ. ಯಾವುದೇ ಕಾರಣಕ್ಕೆ ಜನ ಆತಂಕ ಪಡಬಾರದು. ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದನ್ನು ಮರೆಯಬಾರದು ಎಂದರು.
ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಯಿತು.


