ನವದೆಹಲಿ : ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ “ಪೌರತ್ವ ತಿದ್ದುಪಡಿ ಕಾಯ್ದೆ” ಯನ್ನು ಯಾವುದೇ ಕಾರಣಕ್ಕೆ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಗೃಹ ಸಚಿವರಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಈ ಸಿಎಎ ಕಾಯ್ದೆಯನ್ನು ಯಾವುದೇ ರಾಜ್ಯಗಳು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜಿ ಮಾಡಿಕೊಳ್ಳದೆ ಭಾರತೀಯ ಪೌರತ್ವವನ್ನು ಖಾತ್ರಿಪಡಿಸುವ ಸರ್ಕಾರದ ಬದ್ಧತೆ ದೃಢಪಡಿಸಿದ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಗೊಳಿಸುವುದಿಲ್ಲ ಮತ್ತು ವಿರೋಧ ಪಕ್ಷಗಳಿಂದ ಎಷ್ಟೇ ವಿರೋಧ ಎದುರಾದರೂ ಹಿಂಪಡೆಯುವುದಿಲ್ಲ, ಸಿಎಎ ಜಾರಿ ಮಾಡುವುದು ಶತಸಿದ್ಧ ಎಂದಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮೂರು ದೇಶಗಳಿಂದ ಭಾರತಕ್ಕೆ ಬಂದಿರುವ ಹಿಂದೂಗಳು, ಬೌದ್ಧರು, ಕ್ರೈಸ್ತರು , ಪಾರ್ಸಿಗಳು, ಜೈನರು ಮತ್ತು ಸಿಖ್ಖರಿಗೆ ಭಾರತೀಯ ಪೌರತ್ವ ನೀಡುವ ಕಾಯ್ದೆ ಇದಾಗಿದೆ. 2014ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದವರಿಗೆ ಪೌರತ್ವ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
“ಅಲ್ಪಸಂಖ್ಯಾತರು ಅಥವಾ ಯಾವುದೇ ವ್ಯಕ್ತಿ ಭಯಪಡುವ ಅಗತ್ಯವಿಲ್ಲ ಏಕೆಂದರೆ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಯಾವುದೇ ಅವಕಾಶವಿಲ್ಲ”. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಬೌದ್ಧರು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿ ನಿರಾಶ್ರಿತರಿಗೆ ಹಕ್ಕುಗಳು ಮತ್ತು ಪೌರತ್ವವನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ಧಾರೆ ಸಿಎಎ ಮೂಲಕ ಬಿಜೆಪಿ ಹೊಸ ವೋಟ್ ಬ್ಯಾಂಕ್ ಸೃಷ್ಟಿಸುತ್ತಿದೆ ಎನ್ನುವ ಪ್ರತಿಪಕ್ಷಗಳ ಆರೋಪ ತಳ್ಳಿಹಾಕಿದ ಅವರು ಬಗ್ಗೆ “ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ, ಪ್ರತಿಪಕ್ಷಗಳು ಹೇಳುವುದನ್ನು ಎಂದಿಗೂ ಮಾಡುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಸಂವಿಧಾನ ೩೭೦ ನೇ ವಿಧಿಯನ್ನು ರದ್ದುಗೊಳಿಸಿದ್ದು ರಾಜಕೀಯ ಲಾಭಕ್ಕಾಗಿ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. 1950 ಜಾರಿಯಲ್ಲಿದ್ದ 370 ನೇ ವಿಧಿಯನ್ನು ತೆಗೆದುಹಾಕಿದ್ದೇವೆ ಎಂದು ಸ್ಪಷ್ಟಪಡಿಸಿದರು. ಪ್ರತಿಪಕ್ಷಗಳು ತುಷ್ಟೀಕರಣದ ರಾಜಕೀಯ ಮಾಡಲು ಬಯಸುತ್ತವೆ ಮತ್ತು ತಮ್ಮ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸಲು ಬಯಸುತ್ತವೆ. ಅವುಗಳನ್ನು ಬಹಿರಂಗಪಡಿಸಲಾಗಿದೆ.


