ಮಂಗಳೂರು ; ಕಾಯಿಲೆಯಿಂದ ಬಳಲುತ್ತಿರುವ ಬ್ಯಾಟರಿ ಫ್ಯಾಕ್ಟರಿಯ ಕಾರ್ಮಿಕರು ಬ್ಯಾಟರಿ ಹಾಗೂ ಬ್ಯಾಟರಿ ಸಂಬಂಧಿತ ಇತರ ವಸ್ತುಗಳನ್ನು ಉತ್ಪಾಧಿಸುತ್ತಿರುವ ಫ್ಯಾಕ್ಟರಿ ಒಂದರಲ್ಲಿ ಕಾರ್ಮಿಕರು ಹಲವು ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಈ ಅಚಾತುರ್ಯ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ಹೊರವಲಯದ ಬೈಕಂಪಾಡಿಯಲ್ಲಿರುವ ಈಶ್ವರಿ ಗ್ಲೋಬಲ್ ಮೆಟಲ್ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪೆನಿಯೊಂದು ಕಾರ್ಯಾಚರಿಸ್ತಾ ಇದೆ. ಇಲ್ಲಿ ಅನೇಕ ರೀತಿಯ ಬ್ಯಾಟರಿ ಹಾಗೂ ಬ್ಯಾಟರಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ಕಾರ್ಮಿಕರು ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಮಾರಕ ಕಾಯಿಲೆಗೆ ತುತ್ತಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪ್ರತಿ ತಿಂಗಳು ಇಲ್ಲಿನ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲಾ ಅನ್ನೋ ಸರ್ಟಿಫಿಕೇಟ್ ಕಂಪೆನಿ ನೀಡುತ್ತಿದೆ. ಆದ್ರೆ ಅಸಲಿಗೆ ಈ ಆರೋಗ್ಯ ತಪಾಸಣ ವರದಿಯೇ ಸುಳ್ಳಾಗಿದ್ದು, ನೈಜ್ಯ ಕಾರ್ಮಿಕರ ಬದಲಾಗಿ ಬೇರೆಯೇ ಜನರ ಆರೋಗ್ಯ ತಪಾಸಣೆಯ ವರದಿಯನ್ನು ಕಂಪೆನಿ ನಕಲಿಯಾಗಿ ತಯಾರಿಸುತ್ತಿದೆ ಅನ್ನೋ ದೂರುಗಳು ಕೂಡಾ ಕೇಳಿ ಬಂದಿದೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಈಶ್ವರಿ ಗ್ಲೋಬಲ್ ಮೆಟಲ್ ಇಂಡಸ್ಟ್ರೀಸ್ ಕಾರ್ಯಾಚರಣೆ ಮಾಡುತ್ತಿದ್ದು, ಇಲ್ಲಿ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕ್ರಮ ಇಲ್ಲ ಅನ್ನೋದು ಸ್ಪಷ್ಟ. ಕೆಲಸ ಕಳೆದುಕೊಳ್ಳುವ ಭಯದಿಂದ ಕಾರ್ಮಿಕರು ಈ ಬಗ್ಗೆ ಬಾಯಿ ಬಿಡಲು ಭಯ ಪಡುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಇಲ್ಲಿಗೆ ಬೇಟಿ ನೀಡಿ ಅಸಲಿ ವಿಚಾರವನ್ನು ಬಯಲಿಗೆಳೆಯಬೇಕಾಗಿದೆ.
ಈಶ್ವರಿ ಗ್ಲೋಬಲ್ ಮೆಟಲ್ ಇಂಡಸ್ಟ್ರಿಯ ಹಲವು ಕಾರ್ಮಿಕರು ಗಂಭೀರ ಕಾಯಿಲೆಯಿಂದ ಬಳಲುತ್ತಿರಲು ಫ್ಯಾಕ್ಟರಿ ಒಳಗಿನ ಅಸುರಕ್ಷಿತ ವ್ಯವಸ್ಥೆ ಕಾರಣ ಅನ್ನೋದರಲ್ಲಿ ಅನುಮಾನವೇ ಇಲ್ಲ. ಆದ್ರೆ ತನ್ನ ಹಣದ ಬಲದಲ್ಲಿ ಕಾರ್ಮಿಕರ ಬದಲಾಗಿ ಬೇರೆಯವರ ಆರೋಗ್ಯ ತಪಾಸಣೆ ಮಾಡಿಸಿ ನಕಲಿ ದಾಖಲೆಯ ಮೂಲಕ ಸರ್ಕಾರವನ್ನೇ ವಂಚಿಸುವ ಕೆಲಸ ಫ್ಯಾಕ್ಟರಿಯ ಮಾಲೀಕರಿಂದ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮದ ಜೊತೆಗೆ ಕಾರ್ಮಿಕರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕಾಗಿದೆ.