ನವದೆಹಲಿ :ಉಚಿತ ಕೊಡುಗೆ (ಫ್ರೀಬೀಸ್)' ಎನಿಸುವಗ್ಯಾರಂಟಿ’ಯಂತಹ ಜನಪ್ರಿಯ ಆರ್ಥಿಕ ಯೋಜನೆಗಳಿಂದಾಗಿ ರಾಜ್ಯ ಸರ್ಕಾರಗಳು ಬೃಹತ್ ಪ್ರಮಾಣದ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ ದೀರ್ಘಾವಧಿವರೆಗೂ ಇವು ಪ್ರಗತಿ ಹಾಗೂ ಸಾರ್ವಜನಿಕ ಹೂಡಿಕೆಗಳಿಗೆ ಅಡ್ಡಿಯಾಗುವಂತಹ ದುಷ್ಪರಿಣಾಮಗಳನ್ನು ಬೀರಲಿವೆ ಎಂದು ೨೦೨೫- ೨೬ನೇ ಸಾಲಿನ ಆರ್ಥಿಕ ಸಮೀಕ್ಷೆ ಎಚ್ಚರಿಸಿದೆ.
ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆರಾಜ್ಯಸಭೆಯಲ್ಲಿ ಮಂಡಿಸಿದ 2025-26 ನೇ ಸಾಲಿನ ಆರ್ಥಿಕ ಸಮೀಕ್ಷೆಯು ಉಚಿತ ಗ್ಯಾರಂಟಿಗಳ ದುಷ್ಪರಿಣಾಮಗಳನ್ನು ಪಟ್ಟಿ ಮಾಡಿದೆ. ಕೆಲವು ರಾಜ್ಯಗಳಲ್ಲಿನ ಗ್ಯಾರಂಟಿಗಳ ವ್ಯಾಪಕ ವಿಸ್ತರಣೆ, ಅದರಲ್ಲೂ ಮಹಿಳೆಯರಿಗೆ ಬೇಷರತ್ತಾಗಿ ನೇರ ನಗದು ವರ್ಗಾವಣೆ ಇತ್ಯಾದಿ ಕಸರತ್ತುಗಳಿಂದಾಗಿ ಹಣಕಾಸು ಬಿಕ್ಕಟ್ಟು ಹಾಗೂ ಬಳಲಿಕೆ ತಲೆದೋರಲಿದೆ. 2026 ರ ಹಣಕಾಸು ವರ್ಷದಲ್ಲಿ 1.7 ಲಕ್ಷ ಕೋಟಿ ರೂ.ವನ್ನು ನೇರ ನಗದು ವರ್ಗಾವಣೆಗೆ ವಿನಿಯೋಗಿಸಲಾಗುತ್ತಿದೆ. ಇದರಿಂದಾಗಿ ಮುಖ್ಯವಾಗಿ ಸಾರ್ವಜನಿಕ ಹೂಡಿಕೆಗಳಿಗೆ ನಿರ್ಬಂಧ ಉಂಟಾಗಲಿದೆ ಎಂದು ಆತಂಕಿಸಲಾಗಿದೆ.
ಪ್ರಸ್ತುತ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ತರ್ಕಬದ್ಧವಲ್ಲದ ಕೆಲವು ಸಹಾಯಧನಗಳ ಯೋಜನೆಗಳ ಪರಿಣಾಮವಾಗಿ ಹಣಕಾಸು ಸಂಪನ್ಮೂಲಗಳ ಕೊರತೆ, ಸಾಲದ ಪ್ರಮಾಣದಲ್ಲಿ ಏರಿಕೆ ಮತ್ತು ಸಂಪನ್ಮೂಲಗಳ ಮೇಲಿನ ಬಂಡವಾಳ ಹೂಡಿಕೆಯಲ್ಲಿ ಇಳಿಕೆ ಇತ್ಯಾದಿ ದುಷ್ಪರಿಣಾಮಗಳಾಗಲಿವೆ. 2023 ಮತ್ತು 2026ರ ಹಣಕಾಸು ವರ್ಷಗಳ ನಡುವಣ ಅವಧಿಯಲ್ಲಿ ಇದು ಹೆಚ್ಚಾಗಿದೆ. ರಾಜ್ಯಗಳ ಬಜೆಟ್ಗಳಲ್ಲಿ ಗ್ಯಾರಂಟಿಗಳಿಗಾಗಿ ಶೇ. 8.26 ಪ್ರಮಾಣದ ಹಣ ಮೀಸಲಿರಿಸಲಾಗುತ್ತಿದೆ. ಇದರಿಂದಾಗಿ ಆಯಾ ರಾಜ್ಯಗಳಲ್ಲಿ ಆದಾಯದ ಕೊರತೆ ಹಾಗೂ ಭವಿಷ್ಯದ ಪ್ರಗತಿಗೆ ಮಾರಕ ಹೊಡೆತ ನೀಡಲಿದೆ ಎಂದು ಸಿಎಜಿ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್) ಎಚ್ಚರಿಸಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಗ್ಯಾರಂಟಿ ಸ್ಕೀಮ್ಗಳ ಜಾರಿಯಿಂದ ರಾಜ್ಯಗಳಲ್ಲಿ ಹಣಕಾಸು ಕೊರತೆ ತಲೆದೋರಲಿದ್ದು, ದೊಡ್ಡ ಆರ್ಥಿಕ ಆಘಾತಗಳು ಎದುರಾದಾಗ ಅದನ್ನು ಎದುರಿಸಲು ರಾಜ್ಯಗಳು ಅಸಮರ್ಥವಾಗಲಿವೆ ಎಂದು ಎಚ್ಚರಿಸಲಾಗಿದೆ.
ಉಚಿತ ಗ್ಯಾರಂಟಿಗಳಂತಹ `ಫ್ರೀಬೀಸ್’ ಕಾರ್ಯಕ್ರಮಗಳನ್ನು ಮರು ವಿನ್ಯಾಸಗೊಳಿಸಲು ಆರ್ಥಿಕ ಸಮೀಕ್ಷೆ ಸಲಹೆ ನೀಡಿದೆ. ಅತ್ಯಂತ ದುರ್ಬಲ ಮತ್ತು ದೀರ್ಘಾವಧಿ ಸಂಪನ್ಮೂಲ ಕ್ರೋಢೀಕರಣ ಮಾಡುವಂತಹ ವರ್ಗಗಳಿಗೆ ಮಾತ್ರ ಬಹು ಎಚ್ಚರಿಕೆಯಿಂದ ಗ್ಯಾರಂಟಿ ಯೋಜನೆ ರೂಪಿಸುವ ಅಗತ್ಯವಿದೆ. ತತ್ಕಾಲದ ಅಲ್ಪ ಪ್ರಯೋಜನಗಳಿಗಾಗಿ ಗ್ಯಾರಂಟಿ ಸ್ಕೀಂಗಳನ್ನು ಮಾಡಬಾರದು ಎಂದು ಎಚ್ಚರಿಸಲಾಗಿದೆ.


