ತುಮಕೂರು: ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ರಥಸಂದ್ರ ಗ್ರಾಮದಲ್ಲಿ ನಡೆದಿದೆ.
ಭಾನುವಾರವಾದ್ದರಿಂದ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಕೆರೆಯ ಬಳಿ ಬಟ್ಟೆಯನ್ನು ತೊಳೆಯಲು ಹೋಗಿದ್ದ ಮಹಿಳೆ, ತನ್ನ ಇಬ್ಬರು ಮಕ್ಕಳು ಆಟವಾಡುತ್ತಾ ಕೆರೆ ಬಿದ್ದಿದ್ದನ್ನು ನೋಡಿ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾಳೆ. ಆದರೆ, ಮಕ್ಕಳ ಜೀವವನ್ನು ಉಳಿಸಿದ ಮಹಿಳೆ, ಕೊನೆಗೆ ಈಜು ಬಾರದೇ ಆಳಕ್ಕೆ ಬಿದ್ದು ಪ್ರಾಣತ್ಯಾಗ ಮಾಡಿದ್ದಾಳೆ.
ಮೃತ ಮಹಿಳೆಯನ್ನು ಮನು (30) ಎಂದು ಗುರುತಿಸಲಾಗಿದೆ. ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ. ಮೃತ ಮಹಿಳೆ ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಳು. ಇಬ್ಬರು ಮಕ್ಕಳು ಕೆರೆ ದಡದಲ್ಲಿ ಆಟವಾಡುತ್ತಿದ್ದರು. ಹೀಗಾಗಿ, ತನ್ನ ಬಟ್ಟೆ ಒಗೆಯುವ ಕಾರ್ಯವನ್ನು ಮುಂದುವರೆಸಿದ್ದಳು. ಆದರೆ, ಇದ್ದಕ್ಕಿಂತೆ ನೀರಿಗೆ ಮಕ್ಕಳು ಬಿದ್ದಿರುವ ಘಟನೆ ನಡೆದಿದ್ದು, ಇದನ್ನು ಕಂಡು ಗಾಬರಿಯಾದ ಮಹಿಳೆ ತನಗೆ ಈಜು ಬರುವುದಿಲ್ಲ ಎಂಬ ಅರಿವೂ ಇಲ್ಲದೆಯೇ ಕೆರೆಗೆ ಹಾರಿ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾಳೆ.
ಈ ವೇಳೆ ಈಜು ಬಾರದ ಮನು ತನ್ನ ಜೀವವನ್ನು ಲೆಕ್ಕಿಸದೆ ಕರೆಗೆ ಹಾರಿ ಕರುಳಕುಡಿಗಳನ್ನು ರಕ್ಷಿಸಿ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡ ಇಬ್ಬರು ಮಕ್ಕಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


