ಡೆಹರಾಡೂನ್ : ಪ್ರಯಾಣಿಕರಿದ್ದ ಬಸ್‌ವೊಂದು ಕಮರಿಗೆ ಬಿದ್ದು 36 ಮಂದಿ ಮೃತಪಟ್ಟಿರುವ ದಾರುಣ ಘಟನೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಸಂಭವಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, 46 ಪ್ರಯಾಣಿಕರಿದ್ದ ಈ ಬಸ್ ಇಂದು ಬೆಳಿಗ್ಗೆ ಮಾರ್ಚುಲಾ ಬಳಿ 200 ಮೀ. ಆಳದ ಕಮರಿಗೆ ಉರುಳಿ ಬಿದ್ದು, ಈ ಭೀಕರ ಅವಘಡ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಂಡಿತು. ಘಟನೆಯಲ್ಲಿ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಅಸು ನೀಗಿದ್ದಾರೆ.
ಮೂವರನ್ನು ವಿಮಾನದ ಮೂಲಕ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಸಂಭವಿಸುತ್ತಿದಂತೆ ಪ್ರಯಾಣಿಕರ ಚೀರಾಟ ಮುಗಿಲು ಮುಟ್ಟಿತ್ತು. ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ರೋಧನ ಹೇಳ ತೀರಾದಾಗಿತ್ತು.
ಈ ನತದೃಷ್ಟ ಬಸ್ ಘರ್‌ವಾಲ್ ಮೋಟಾರ್ ಮಾಲೀಕರ ಒಕ್ಕೂಟಕ್ಕೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಪುಷ್ಕರ್‌ಸಿಂಗ್ ಧಾಮಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಘಟನೆ ಬಗ್ಗೆ ಎಕ್ಸ್ ಖಾತೆಯಲ್ಲಿ ದಿಗ್ಭçಮೆ ವ್ಯಕ್ತಪಡಿಸಿದ್ದಾರೆ
ಸ್ಥಳೀಯ ಆಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಮೃತ ಕುಟುಂಬ ಸದಸ್ಯರಿಗೆ ೪ ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆ. ಗಾಯಾಳುಗಳಿಗೆ ೧ ಲಕ್ಷ ರೂ. ನೆರವನ್ನು ಘೋಷಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.