ಟೋಕಿಯೋ: ಜಪಾನಿನ ಇಶಿಕಾವಾ ದ್ವೀಪದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ವಿನಾಶಕಾರಿ ಸರಣಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 50 ಕ್ಕೇರಿದೆ. ನೂರಾರು ಜನರು ಗಾಯಗೊಂಡಿದ್ದು, ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರವು ಮಾಡಲಾಗಿದೆ. ಭೂಕಂಪ ಸಂತ್ರಸ್ತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯಿದ್ದ ಭೂಕಂಪದ ಹೊಡೆತಕ್ಕೆ ಇಶಿಕಾವಾದ ವಾಜಿಮಾ ಬಂದರು ಪಟ್ಟಣ ನರಕಸದೃಶವಾಗಿ ಮಾರ್ಪಟ್ಟಿದೆ.
ನೂರಾರು ಕಟ್ಟಡಗಳು ಧರೆಗುರುಳಿದಿದ್ದು, ಅಪಾರ ಸಂಖ್ಯೆಯ ವಾಹನಗಳು ನಾಶವಾಗಿವೆ. ಒಂದೇ ದಿನ ಈ ಪ್ರಾಂತ್ಯದಲ್ಲಿ 155 ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ.
ಪಟ್ಟಣದ ಬಹುತೇಕ ಹೆದ್ದಾರಿಗಳು ಬಿರುಕು ಬಿಟ್ಟಿವೆ. ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ನಾಶಗೊಂಡಿರುವ ಕಟ್ಟಡಗಳಿಂದ ಈವರೆಗೆ ಲಕ್ಷ ಜನರನ್ನು ಪಾರುಮಾಡಲಾಗಿದೆ.


