ಚಿಕ್ಕಬಳ್ಳಾಪುರ : ಚಿಂತಾಮಣಿಯಲ್ಲಿ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮಗ ಮಾಡಿದ ನೀಚ ಕೃತ್ಯಕ್ಕೆ ತಾಯಿಗೆ ಬೆಂಕಿ ಹಚ್ಚಿ ಕಿರಾತಕರು ಕೊಂದಿದ್ದಾರೆ. ಬೆಂಕಿಯಿಂದ ಸುಟ್ಟಿದ್ದ ಲಕ್ಷ್ಮೀದೇವಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಕೆಜಿಎನ್ ಬಡಾವಣೆಯಲ್ಲಿ ಮಾರ್ಚ್ 21 ರಂದು ಈ ಘಟನೆ ನಡೆದಿದ್ದು ನಾಲ್ಕು ಮದುವೆಯಾಗಿದ್ದವನ ಜೊತೆ ತಂಗಿ ಹೋಗಿದ್ದಕ್ಕೆ ಕೋಪಗೊಂಡು ಅಣ್ಣ ಈ ಕೃತ್ಯ ನಡೆಸಿದ್ದಾನೆಂದು ತಿಳಿದುಬಂದಿದೆ.
ಮೃತ ಲಕ್ಷ್ಮಿದೇವಮ್ಮ ಮಗ 40 ವರ್ಷದ ಪುರುಷೋತ್ತಮ್ ಜೊತೆ 20 ವರ್ಷದ ಶ್ರಾವಣಿ ಓಡಿ ಹೋಗಿ ಮದುವೆಯಾಗಿದ್ದರು. ಪುರುಷೋತ್ತಮ್ ಗೆ ನಾಲ್ಕು ಮದುವೆಯಾಗಿದ್ದನೆಂದು ತಿಳಿದು ಶ್ರಾವಣಿ ಸಹೋದರರಿಗೆ ಪಿತ್ತ ನೆತ್ತಿಗೇರಿತ್ತು.ಅಂದು ರಾತ್ರಿ ಶ್ರಾವಣಿ ಅಣ್ಣ ನವೀನ್ ಹಾಗೂ ಆತನ ಸ್ನೇಹಿತ ವಿನೋದ್ ಪುರುಷೋತ್ತಮ್ ಮನೆಗೆ ಬಂದಿದ್ದರು. ಮನೆಯಲ್ಲಿ ಪುರುಷೋತ್ತಮ್ ಇರಲಿಲ್ಲದ ವೇಳೆ ಮಲಗಿದ್ದ ಆತನ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಲಕ್ಷ್ಮಿದೇವಮ್ಮ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದು ಅವರನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಚಿಂತಾಮಣಿ ಪೊಲೀಸರು ನವೀನ್ ಹಾಗೂ ವಿನೋದ್ ರನ್ನು ಬಂಧಿಸಿದ್ದಾರೆ.


