ಚಳ್ಳಕೆರೆ : ದಲಿತ ಕುಟುಂಬದ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಸಚಿವರ ಡಿ.ಸುಧಾಕರ್ ಮೇಲೆ ಅಟ್ರಾಸಿಟಿ ಎಫ್ ಐಆರ್ ದಾಖಲಾದ ಬೆನ್ನಲ್ಲೆ ಚಳ್ಳಕೆರೆ ನಾಯಕನಹಟ್ಟಿ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದು, ಪ್ರಕರಣದಿಂದ ಪಾಲಾಗಲು ದೇವರ ಮೊರೆ ಹೋಗಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪಟ್ಟಿಣದಲ್ಲಿರುವ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಸಚಿವ ಡಿ.ಸುಧಾಕರ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಸುಧಾಕರ್ ತಿಪ್ಪೇರುದ್ರಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಇದರಿಂದ ತಮ್ಮ ನೆಚ್ಚಿನ ದೇವರಲ್ಲಿ ಪ್ರಕರಣದಿಂದ ಪಾರಾಗಲು ಮೊರೆ ಹೋಗಿದ್ದಾರೆ. ತಮ್ಮ ಮೇಲೆ ದಾಖಲಾಗಿರುವ ಕೇಸ್ ನಿಂದ ಸಚಿವ ಸ್ಥಾನಕ್ಕೆ ತೊದರೆಯಾಗುವ ಸಾಧ್ಯತೆ ಹೆಚ್ಚಿದ್ದು, ಈ ಸಂಕಷ್ಟ ಪರಿಹಾರಕ್ಕಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಕಂಪನಿಯ ಪಾಲುದಾರರಾದ ಸಚಿವ ಸುಧಾಕರ್ ಮೋಸದಿಂದ ಯಲಹಂಕ ಗ್ರಾಮದ ಸರ್ವೆ ನಂಬರ್ 108/1ರ ಜಮೀನು ಕಬಳಿಸಿದ್ದಾರೆ. ಈ ಜಮೀನಿನ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕುಟುಂಬದ ಮಹಿಳೆಯರನ್ನು ಹೊರಗೆ ಎಳೆದೊಯ್ದು ಜೆಸಿಬಿ ಮೂಲಕ ಮನೆ ಕೆಡವಿಸಿದ್ದಾರೆ ಎಂದು ಮುನಿಯಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.


