ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಜಮೀನೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕೊಂದು ಮರಕ್ಕೆ ನೇತು ಹಾಕಿರುವ ಭೀಕರ ಘಟನೆ ಗದಗದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ಕಾರ್ಯಕರ್ತ ಡೋಣಿ ಗ್ರಾಮದ ಶರಣಪ್ಪ ಸಂದಿಗೌಡರು ಎಂದು ತಿಳಿದುಬಂದಿದೆ. ಹತ್ಯೆ ಮಾಡಿ ದುಷ್ಕರ್ಮಿಗಳು ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಜಮೀನೊಂದರಲ್ಲಿ ಮರಕ್ಕೆ ನೇತು ಹಾಕಿದ್ದಾರೆ.
ಕೊಲೆಗೂ ಮುನ್ನ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ದುಷ್ಕರ್ಮಿಗಳು, ಕಣ್ಣಿಗೆ ಕಾರದಪುಡಿ ಎಸೆದು ಹಲ್ಲೆ ಮಾಡಿದ್ದಾರೆ. ನಂತರ ಶವ ತೂಗು ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬೆಳ್ಳಂಬೆಳಿಗ್ಗೆ ಮರದಲ್ಲಿ ನೇತಾಡುತ್ತಿರುವ ಶವ ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದು,ಇಂದು ಡಂಬಳದಲ್ಲಿ ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರನ ಹತ್ಯೆ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡಿದೆ. ಮುಂಡರಗಿ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಕುಸುಗಲ್ಲ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


