ಗಂಗಾವತಿ : `ತನಗೆ ರಾಜಕೀಯ ಪುನರ್ಜನ್ಮ ನೀಡಿದ ಗಂಗಾವತಿ ಮತಕ್ಷೇತ್ರ ಮತ್ತು ಕರುನಾಡು ಸುಭಿಕ್ಷೆಯಿಂದ ಕೂಡಿರಲಿ.. ನನ್ನೆಲ್ಲಾ ಸಂಕಷ್ಟಗಳು ದೂರಾಗಿ ವನವಾಸದಿಂದ ಮುಕ್ತನಾಗಿ ನನಗೆ ಮೊದಲಿನ ದಿನಗಳನ್ನು ಕರುಣಿಸು ದೇವಾ’……. ಹೀಗೆಂದು ಶಾಸಕ ಜನಾರ್ದರೆಡ್ಡಿ, ಹಂಪೆಯ ಪಂಪಾವಿರೂಪಾಕ್ಷನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಡಿ ಭಾಗವಾಗಿರುವ ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡೆ ಗ್ರಾಮದ ಬಂಡೆಯೊಂದರ ಮೇಲೆ ಕುಳಿತು, ಹಂಪೆಯ ಆರಾಧ್ಯದೈವ ಪಂಪಾ ವಿರೂಪಾಕ್ಷೇಶ್ವರನಿಗೆ ಅಭಿಮುಖವಾಗಿ ಶಾಸಕ ಜಿ. ಜನಾರ್ದರೆಡ್ಡಿ ಹೀಗೊಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ರೆಡ್ಡಿ ಅವರ ಮೇಲೆ ರಾಜಕೀಯ ಸಾಕಷ್ಟು ಪ್ರಕರಣ ಇವೆ. ಈ ಹಿನ್ನೆಲೆ ಜನಾರ್ದರೆಡ್ಡಿ ಅವರು ಬಳ್ಳಾರಿ ಜಿಲ್ಲಾ ಗಡಿ ಪ್ರವೇಶಿಸಬಾರರು ಎಂದು ನ್ಯಾಯಾಲಯದಿಂದ ಆದೇಶ ಮಾಡಲಾಗಿದೆ.
ಹೀಗಾಗಿ ರೆಡ್ಡಿ ಅವರು ವಿಶೇಷ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ಬಳ್ಳಾರಿ ಪ್ರವೇಶಿಸುವಂತಿಲ್ಲ. ಆದರೆ ತಮ್ಮ ನೆಚ್ಚಿನ ಆರಾಧ್ಯ ದೈವವಾಗಿರುವ ಪಂಪಾ ವಿರೂಪಾಕ್ಷೇಶ್ವರನ ದರ್ಶನಕ್ಕೂ ಅಡೆತಡೆಯಾಗಿದ್ದರಿಂದ ರೆಡ್ಡಿ, ವಿರುಪಾಪುರ ಗಡ್ಡೆಯಿಂದಲೇ ದೈವ ದರ್ಶನ ಮಾಡಿದ್ದಾರೆ.
ನನ್ನೆಲ್ಲಾ ಸಂಕಷ್ಟಗಳನ್ನು ದೂರ ಮಾಡಿ, ನನ್ನ ಮೇಲೆ ದಾಖಲಾಗಿರುವ ಪ್ರಕರಣಗಳು ಖುಲಾಸೆಯಾಗಿ ನೇರವಾಗಿ ನಿನ್ನ ದರ್ಶನ ಭಾಗ್ಯ ಕರುಣಿಸು. ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ಇರುವ ನಿರ್ಬಂಧ ತೆರವು ಮಾಡು’ ಎಂದು ಶಾಸಕ ರೆಡ್ಡಿ ಪಂಪಾ ವಿರೂಪಾಕ್ಷೇಶ್ವರನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ


