ಕೊಚ್ಚಿ : ಅಲುವಾ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆರೋಪಿಯನ್ನು ಸುಜಿತ್ ಸುರೇಶ್ (19) ಎಂದು ಗುರುತಿಸಲಾಗಿದ್ದು,ಈತ ಅಂಗಮಾಲಿ ಬಳಿಯ ಪರಕಡವು ಮೂಲದವನು ಎಂದು ತಿಳಿದಿದೆ.
ಆರ್‌ಪಿಎಫ್ ಅಧಿಕಾರಿಗಳ ಪ್ರಕಾರ, ಮಾರ್ಚ್ 7 ರಂದು ನೆಡುಂಬಸ್ಸೆರಿ ವಿಮಾನ ನಿಲ್ದಾಣದ ಬಳಿ ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಗುರಿಯಾಗಿಸಿಕೊಂಡು ಈ ಘಟನೆ ನಡೆದಿದೆ. ಕಲ್ಲು ತೂರಾಟದಿಂದ ರೈಲಿನ ಪಕ್ಕದ ಕಿಟಕಿ ಗಾಜುಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ.
ಘಟನೆಯ ನಂತರ, ಆರ್‌ಪಿಎಫ್ ಮತ್ತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದು . ರೈಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು, ಅಧಿಕಾರಿಗಳು ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ . ನಂತರ ಗುರುವಾರ ಆರ್‌ಪಿಎಫ್ ಮತ್ತು ರೈಲ್ವೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಯಿತು.
ವಿಚಾರಣೆಯ ಸಮಯದಲ್ಲಿ, ಸಂಬಂಧ ವಿಫಲವಾದ ಕಾರಣ ನೊಂದ ಆರೋಪಿ ಕಲ್ಲು ತೂರಾಟ ನಡೆಸಿರುವುದಾಗಿ ಅಧಿಕಾರಿಗಳಿಗೆ ಹೇಳಿದ್ದಾನೆ ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


