ಕಾಸರಗೋಡು : ಸೋಮವಾರ ಮಧ್ಯಾಹ್ನ ನೀಲೇಶ್ವರಂ ಬಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು 22 ವರ್ಷದ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ನಂದನಾ ಎಂದು ಗುರುತಿಸಲಾಗಿದ್ದು, ನೀಲೇಶ್ವರಂ ಬಳಿಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ .
ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ಮಧ್ಯಾಹ್ನ 2:30 ರ ಸುಮಾರಿಗೆ ಹೊರಡುವಾಗ ಈ ಘಟನೆ ಸಂಭವಿಸಿದೆ. ಸೋಮವಾರದಂದು ಲೊಕೊ ಪೈಲಟ್ ಮಹಿಳೆಗೆ ಹಾರ್ನ್ ಹೊಡೆದರು ರೈಲು ಹಳಿಯಿಂದ ಹಿಂದೆಸರಿಯಲಿಲ್ಲ ಎಂದು ತಿಳಿದುಬಂದಿದೆ.
ಲೋಕೋ ಪೈಲಟ್ನಿಂದ ಮಾಹಿತಿ ಪಡೆದ ನೀಲೇಶ್ವರಂ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.


