ಕಾಸರಗೋಡು : ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ತೆಕ್ಕಿಲ್ ಎಂಬಲ್ಲಿ ಸೋಮವಾರ ರಾತ್ರಿ ಬಿಎಂಡಬ್ಲ್ಯು ಕಾರು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿದ್ದಾರೆ.
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ್ ಬೈಲುಗುತ್ತುವಿನ ಆಸಿಫ್ ಮುಹಮ್ಮದ್ (41) ಮತ್ತು ನಾಟೆಕಲ್ನ ಮುಹಮ್ಮದ್ ಶಫೀಕ್ (23) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಐವರು ಮಂಗಳೂರು ಮೂಲದವರಾಗಿದ್ದಾರೆ.
ಪೊಲೀಸರ ಪ್ರಕಾರ, ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನೊಳಗೆ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.
ಗಾಯಾಳುಗಳನ್ನು ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಐದು ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ವಯನಾಡಿಗೆ ಪ್ರವಾಸದಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.


