Sunday, March 15, 2026
Flats for sale
Homeಜಿಲ್ಲೆಕಾರ್ಕಳ : ಪರಶುರಾಮ ಥೀಮ್‌ ಪಾರ್ಕ್‌ ವಿವಾದ : 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ...

ಕಾರ್ಕಳ : ಪರಶುರಾಮ ಥೀಮ್‌ ಪಾರ್ಕ್‌ ವಿವಾದ : 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು,ರಸ್ತೆಗೆ ಮಣ್ಣು ಸುರಿದು ಬಂದ್ ಮಾಡಿ ಸೋಲೊಪ್ಪಿಕೊಂಡ ಮುನಿಯಲ್ ಉದಯ ಕುಮಾರ್ ಶೆಟ್ಟಿ.!

ಕಾರ್ಕಳ : ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಒಂದು ಪ್ರವಾಸ್ಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಒಂದು ಪ್ರಾಜೆಕ್ಟ್.ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಶ್ರೀ ಸುನಿಲ್ ಕುಮಾರ್ ಅವರು ಮುತುವರ್ಜಿ ವಹಿಸಿ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಿದ್ದರು. ಆ ಮೂಲಕ ಉಡುಪಿ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸಚಿವರು ಈ ಕಾರ್ಯ ಕೈಗೆತ್ತಿಕೊಂಡಿದ್ದರು. ಅಂದುಕೊಂಡಂತೆ ಜನವರಿ 27, 2023ರ ರ ವೇಳೆಗೆ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಯನ್ನೂ ಮಾಡಲಾಗಿತ್ತು.ಆದರೆ ಉದ್ಘಾಟನೆ ಯಾದ ದಿನದಿಂದ ರಾಜಕೀಯ ಗುದ್ದಾಟ ಶುರುವಾಗಿದ್ದು ಕೊನೆಗೂ ಕಾಮಗಾರಿ ಪೂರ್ಣಗೊಳಿಸಲು ತೀರ್ಪು ನೀಡಿದೆ .

ಪರಶುರಾಮ‌ ಥೀಮ್‌ ಪಾರ್ಕ್‌ ಕಾಮಗಾರಿಯಲ್ಲಿ ನಡೆದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಬಗ್ಗೆ, ಜತೆಗೆ ಧಾರ್ಮಿಕ ಭಾವನೆಗಳಿಗೆ ಅಪಪ್ರಚಾರವಾಗಿರುವ ಸಂಬಂಧ ಸಾರ್ವಜನಿಕರಿಂದ ಭಾರೀ ದೂರು ಕೇಳಿ ಬಂದಿತ್ತು. ಈ ಪ್ರಯುಕ್ತ ಕಾರ್ಕಳದ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ಅಕ್ರಮ ಕಾಮಗಾರಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.ಅಲ್ಲದೇ ಸ್ವತಃ ಜಿಲ್ಲೆಯ ಕಾಂಗ್ರೆಸ್​ ಕಾರ್ಯಕರ್ತರು ಈ ಪ್ರಕರಣದ ತನಿಖೆ ಪ್ರಾರಂಭವಾಗುವವರೆಗೂ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಖುದ್ದು ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು.

ಈ ನಡುವೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆಲ ತಿಂಗಳುಗಳ ನಂತರ ಅವರ ವರದಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಶುರಾಮ ಥೀಮ್ ಪಾರ್ಕ್ ಹಾಗೂ ಮೂರ್ತಿಯ ಕಾಮಗಾರಿಯನ್ನು ಸಿಐಡಿ ವಿಚಾರಣೆಗೆ ನೀಡಿ ಆದೇಶವನ್ನೂ ಹೊರಡಿಸಿದ್ದರು.

ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಲಾದ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮರ ಕಂಚಿನ ಪ್ರತಿಮೆ ಕಾಮಗಾರಿಯನ್ನು ಮುಂದಿನ 4 ತಿಂಗಳುಗಳ ಕಾಲಾವಧಿಯಲ್ಲಿ ನಿರ್ಮಾಣ ಮಾಡಬೇಕೆಂದು ರಾಜ್ಯ ಹೈಕೋರ್ಟ್ ಇಂದು ಆದೇಶ ಹೊರಡಿಸುವ ಮೂಲಕ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಂದಾಜು 14 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಥೀಮ್ ಪಾರ್ಕ್ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ 10 ಕೋಟಿ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಕಳೆದ 1 ವರ್ಷದಲ್ಲಿ 1 ರೂ. ಹಣವನ್ನು ಥೀಮ್ ಪಾರ್ಕ್ ಅಭಿವೃದ್ಧಿಗೆ ಬಿಡುಗಡೆ ಮಾಡಿಲ್ಲ ಎನ್ನುವುದು ತಿಳಿದುಬಂದಿದೆ.

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದರೊಂದಿಗೆ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಸ್ಥಾಪಿತ ಹಿತಾಸಕ್ತಿಗಳು ನಡೆಸಿದ ಷಡ್ಯಂತ್ರಕ್ಕೆ ಸೋಲಾಗಿದ್ದು, ತಕ್ಷಣ ಥೀಂ ಪಾರ್ಕ್ ಕಾಮಗಾರಿ ಪ್ರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಶಾಸಕ ಸುನಿಲ್ ಕುಮಾರ್ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಹೈ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಚುನಾವಣೆಯಲ್ಲಿ ಪರಾಭವಗೊಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ರಾತ್ರೋ ರಾತ್ರೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಸಂಪರ್ಕಿಸುವ ರಸ್ತೆಗೆ ಮಣ್ಣು ಹಾಕಿ ಸೋಲೊಪ್ಪಿಕೊಂಡಿದ್ದಾರೆ.ಯಾವುದೇ ವಾಹನ ಚಲಿಸದಂತೆ ರಸ್ತೆ ಬ್ಲಾಕ್ ಮಾಡಿದ್ದಾರೆ. ಉಮಿಕಲ್ ಬೆಟ್ಟದ ಮೇಲಿನ 33 ಅಡಿ ಕಂಚಿನ ಪರಶುರಾಮ ಮೂರ್ತಿ (10 ಅಡಿ ಕಾಂಕ್ರಿಟ್ ಬೆಡ್ ಸೇರಿಸಿ) ನಿರ್ಮಾಣಕ್ಕೆ 2,04,96,000/- ರೂ. ಮೊತ್ತವನ್ನು ಮೀಸಲಿಡಲಾಗಿದ್ದು, ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ 1.83 ಕೋಟಿ ರೂ. ವೆಚ್ಚದ ಕಾಮಗಾರಿ ಮುಕ್ತಾಯವಾಗಿದೆ. 79,46,000 ರೂ.ಗಳ ವೆಚ್ಚದ ಮೂರ್ತಿಯ ಕಾಮಗಾರಿ ಬಾಕಿಯಿದ್ದು, ಈ ಮೊತ್ತದ ಕಾಮಗಾರಿ ಮುಕ್ತಾಯಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಇದುವರೆಗೂ ಅನುದಾನ ನೀಡಿರುವುದಿಲ್ಲ.ಇದೀಗ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿದವರಿಗೆ ಕಪಾಳಮೋಕ್ಷವಾಗಿದೆ.

ಇದೀಗ ಜನರಲ್ಲಿ ಕಾಡುವ ಪ್ರಶ್ನೆ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಅವ್ಯವಹಾರ ಆಗಿದ್ದೇ ಆದಲ್ಲಿ, ರಾಜ್ಯ ಸರ್ಕಾರ ಆರಂಭಿಸಿದ್ದ ಸಿಐಡಿ ತನಿಖೆ ಏನಾಯಿತು? ಸಿಐಡಿ ತನಿಖೆಯ ವರದಿ ಯಾಕೆ ಇನ್ನೂ ಸಲ್ಲಿಕೆಯಾಗಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹಾಗೂ ಕಾಂಗ್ರೆಸ್ ನಾಯಕರು ಸೇರಿಕೊಂಡು ಶಾಸಕ ಸುನಿಲ್ ಕುಮಾರ್ ಅವರನ್ನು ಹಣಿಯಲು ಈ ಕಾಮಗಾರಿಯನ್ನು ಗುರಾಣಿಯನ್ನಾಗಿ ಬಳಸಿಕೊಂಡಿತಾ,ಸೇಡುತೀರಿಸಿಕೊಳ್ಳಲು ಹೋಗಿ ಮುನಿಯಲ್ ಉದಯ್ ಕುಮಾರ್ ಶೆಟ್ಟಿ ಸೋಲೊಪ್ಪಿಕೊಂಡ್ರ ,ಹೈ ಕೋರ್ಟ್ ತೀರ್ಪು ನೀಡಿದರೂ ಮತ್ತೊಮೆ ಕಾಮಗಾರಿ ನಡೆಯದಂತೆ ಅಡಚಣೆ ಮಾಡುತ್ತಿರುತ್ತಾರ? ದ್ವೇಷದ ರಾಜಕಾರಣಕ್ಕೆ ಪರಶುರಾಮ್ ಥೀಮ್ ಪಾರ್ಕ್ ಬಲಿಯಾಯಿತಾ? ಎಂಬುದು ಕಟ್ಟಾಕಡೆಯ ಪ್ರಶ್ನೆಯಾಗಿ ಉಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular