ಕಲಬುರಗಿ : ಕಾರಿನಲ್ಲಿ ಕರೆದೊಯ್ದು ಕಣ್ಣಿಗೆ ಕಾರದ ಪುಡಿ ಎರಚಿ ಸಂಸದ ಡಾ. ಉಮೇಶ್ ಜಾಧವ್ ಬೆಂಬಲಿಗ ಬಿಜೆಪಿ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಬಿಜೆಪಿ ಮುಖಂಡ ಗಿರೀಶ್ ಎಂದು ತಿಳಿದುಬಂದಿದೆ.ನಾಲ್ಕು ದಿನಗಳ ಹಿಂದೆಯಷ್ಟೇ BSNL ಸಲಹಾ ಸಮಿತಿ ನಿರ್ದೇಶಕರನ್ನಾಗಿ ಗಿರೀಶ್ ಅವರನ್ನು ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಉಮೇಶ್ ಜಾಧವ್ ಅವರ ಆಪ್ತ ಎನ್ನಲಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಲಾಗಿದೆ.ಗಿರೀಶ್ ಚಕ್ರ ಅವರನ್ನು ಸ್ನೇಹಿತರೇ ಜಮೀನಿಗೆ ಕರೆಸಿದ್ದರು. ಅದರಂತೆ ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಗಾಣಗಾಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.


