ಕಡಬ ; ಹಲವಾರು ಮುಖ್ಯ ರಸ್ತೆಯುದ್ದಕ್ಕೂ ಅಲೆದಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಕುದುರೆಯೊಂದನ್ನು ಯುವಕನೊರ್ವ ಕಟ್ಟಿ ಹಾಕಿ ಠಾಣೆಗೆ ದೂರು ನೀಡಿದ್ದು,ಕೊನೆಗೆ ಕುದುರೆ ಯಜಮಾನ ಕುದುರೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಟ್ಟು ಕುದುರೆಯೊಂದಿಗೆ ಹೊರಟುಹೋದ ಘಟನೆ ಕಡಬದಿಂದ ವರದಿಯಾಗಿದೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಲೆಕ್ಕಾಡಿಯ ವ್ಯಕ್ತಿ ಯೊಬ್ಬರಿಗೆ ಸೇರಿರುವ ಈ ಮೂಕಪ್ರಾಣಿ ಆತನ ಅಸಡ್ಡೆಯಿಂದ ಹಲವು ದಿನಗಳಿಂದ ಪ್ರಮುಖ ರಸ್ತೆಯಲ್ಲೇ ತಿರುಗಾಡುತ್ತಿತ್ತು. ಆಹಾರ ಅರಸುತ್ತಾ ಕುದುರೆ ರಸ್ತೆಯಲ್ಲಿ ಸಂಚರಿಸುವಾಗ ಹಲವಾರು ಬೈಕ್ ಸವಾರರೂ ಅಪಘಾತಕ್ಕೆ ಒಳಗಾದ ಘಟನೆಗಳೂ ನಡೆದಿತು.ಇಂದು ರಸ್ತೆ ಬದಿಯಲ್ಲಿ ತೊಂದರೆ ಕೊಡುತ್ತಿದ್ದ ಈ ಕುದುರೆಯನ್ನು ವಾಹನ ಸವಾರರೊಬ್ಬರು ಬದಿಗೆ ಓಡಿಸಿದ್ದು ಈ ವೇಳೆ ಕುದುರೆ ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಎಂಬವರಿಗೆ ಸೇರಿದ ಕೃಷಿ ತೊಟ್ಟದತ್ತ ಬಂದು ತಾನು ಹೈನುಗಾರಿಕೆ ಸಲುವಾಗಿ ನೆಟ್ಟ ಹಸಿರು ಹುಲ್ಲನ್ನು ನಾಶಪಡಿಸಿದಲ್ಲದೆ ಇಲ್ಲಿನ ಪೈಪ್ಗೂ ಹಾನಿ ಮಾಡಿತ್ತು. ಕುದುರೆ ಇನ್ನಷ್ಟು ಸಾರ್ವಜನಿಕರಿಗೆ ಉಪಟಳ ಕೊಡಬಹುದೆಂದು ರಾಘವ ಅವರು ಕುದುರೆಯ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೂ ಆತ ಉಡಾಫೆ ಉತ್ತರ ನೀಡಲು ಆರಂಭಿಸಿದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುದುರೆಯನ್ನು ಗದ್ದೆಯಲ್ಲಿನ ತೆಂಗಿನ ಮರವೊಂದಕ್ಕೆ ಕಟ್ಟಿಹಾಕಿದ ರಾಘವ ಅವರು ಬಳಿಕ ಕಡಬ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಕುದುರೆಯ ವಾರಿಸುದಾರನ್ನು ಕುದುರೆಯೊಂದಿಗೆ ಠಾಣೆಗೆ ಕರೆಸಿ ರಸ್ತೆಗೆ ಬಿಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಂತೂ ತನ್ನ ಮಾಲೀಕರ ಅಸಡ್ಡೆಯಿಂದಾಗಿ ಮೂಕ ಪ್ರಾಣಿಯೊಂದು ಠಾಣೆಗೆ ಬರುವಂತಾಯಿತು.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ದಿನಂಪ್ರತಿ ಸಾಕು ಪ್ರಾಣಿಗಳಾದ ಆಡು, ದನ,ನಾಯಿಗಳು ಅಲೆದಾಡಿ ವಾಹನಗಳಿಗೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಇದಕ್ಕೆ ಈಗ ಕುದುರೆಯು ಸೇರ್ಪಡೆಯಾಗಿದೆ.ಸಾಕು ಪ್ರಾಣಿಗಳನ್ನು ಬೇಕಾಬಿಟ್ಟಿ ಬಿಟ್ಟು ಸಾರ್ವಜನಿಕರಿಗೆ ಪರೋಕ್ಷ ತೊಂದರೆ ಕೊಡುತ್ತಿರುವ ಇಂತಹ ಮಾಲಕರ ವಿರುದ್ದವೇ ಕ್ರಮ ಕೈಗೊಳ್ಳುವಂತೆ ರಾಘವ ಅವರು ಆಗ್ರಹಿಸಿದ್ದಾರೆ.


