Monday, March 9, 2026
Flats for sale
Homeಜಿಲ್ಲೆಉಳ್ಳಾಲ : ಸೇವಾಶ್ರಮದ ಹಿರಿಯರೊಂದಿಗೆ ದಿನ ಕಳೆದ ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್‌ ಮಂಗಳಾದೇವಿ ವಲಯದ...

ಉಳ್ಳಾಲ : ಸೇವಾಶ್ರಮದ ಹಿರಿಯರೊಂದಿಗೆ ದಿನ ಕಳೆದ ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್‌ ಮಂಗಳಾದೇವಿ ವಲಯದ ಸದಸ್ಯರು.

ಉಳ್ಳಾಲ : ಆಶ್ರಮದ ಹಿರಿಯರ ಜೊತೆಗೆ ಟೈಲರ್ಸ್‌ ವೃತ್ತಿಬಾಂಧವರು ಒಂದು ದಿನವನ್ನು ಕಳೆದುಕೊಳ್ಳುವುದರಿಂದ ಅವರಲ್ಲಿರುವ ಅನಾಥ ಭಾವನೆ ದೂರವಾಗುತ್ತದೆ. ಸಂಘಟನೆಯ ಹಿರಿಯ ಸದಸ್ಯರಿಗೂ ಟೈಲರ್ಸ್‌ ಅಸೋಸಿಯೇಷನ್‌ ಸದಾ ಸಹಕಾರವನ್ನು ನೀಡುತ್ತಾ ಬರುತ್ತಿದೆ ಎಂದು ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್ನಿನ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್‌ ಬಜಾಲ್‌ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್‌ ಮಂಗಳಾದೇವಿ ವಲಯದ ವತಿಯಿಂದ ಟೈಲರ್ಸ್ ಡೇ ದಿನವನ್ನು ಬೆಲ್ಮ ಪೆಲತ್ತಡಿಯ ಸೇವಾಭಾವ ಚಾರಿಟೇಬಲ್‌ ಟ್ರಸ್ಟ್‌ ಅಧೀನದ ಸೇವಾಶ್ರಮದ ಹಿರಿಯರೊಂದಿಗೆ ಸೇರಿಕೊಂಡು ಆಚರಿಸಿದ ಸಂದರ್ಭ ಮಾತನಾಡಿದರು. ಮಂಗಳಾದೇವಿ ವಲಯ ಟೈಲರ್ಸ್‌ ಅಸೋಸಿಯೇಷನ್‌ ೨೦೦೦ ರಲ್ಲಿ ಸ್ಥಾಪನೆಯಾಗಿತ್ತು. ಪ್ರತೀ ವರ್ಷದಲ್ಲಿಯೂ ನಿರಂತರ ಸಾಮಾಜಿಕ ಚಟುವಟಿಕೆಗಳು ನಡೆಸುತ್ತಾ ಬರಲಾಗಿದೆ. ಟೈಲರ್‌ ವೃತ್ತಿ ಬಾಂಧವರಲ್ಲಿ ಹಿರಿಯರಿಗೆ ಸಹಾಯಧನ ನೀಡಲಾಗುತ್ತಿದೆ. ಆಟೋಟ ಸ್ಪರ್ಧೆ, ಮಕ್ಕಳಿಗೆ ಸ್ಕಾಲರ್‌ ಶಿಪ್‌ ಕಾರ್ಯಕ್ರಮ , ಆರೋಗ್ಯ ಶಿಬಿರ, ವೃತ್ತಿ ಬಾಂಧವರಲ್ಲಿ ಕಣ್ಣಿನ ದೋಷ ಹೆಚ್ಚಾಗಿರುವುದರಿಂದ ಕಣ್ಣಿನ ಶಿಬಿರವನ್ನು ನಿರಂತರವಾಗಿ ವಲಯ ಸಂಘ ಆಯೋಜಿಸಿದೆ ಎಂದರು.

ಆಶ್ರಮದ ಮೇಲ್ವಿಚಾರಕ ಜಿ.ಆರ್‌ ಶೆಟ್ಟಿ ಮಾತನಾಡಿ, ಅನಾಥ ಆಶ್ರಮ ಗುರುತಿಸಿ ಬಂದಿರುವುದಕ್ಕೆ ಧನ್ಯವಾದಗಳು. ಬೆಲ್ಮ ಸೇವಾಶ್ರಮ 14 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸದ್ಯ 39 ಮಹಿಳೆಯರು 3 ಗಂಡಸರಿದ್ದಾರೆ. ಗಂಡಸರಿಗೆ ಬೇರೆಯೇ ಕಟ್ಟಡ ಕಟ್ಟಿ ವ್ಯವಸ್ಥೆ ಕಲ್ಪಿಸಲಾಗಿದೆ. ಅನಾಥರನ್ನೇ ಸಲಹುತ್ತೇವೆ. ಈವರೆಗೂ 18 ಮಂದಿ ಮರಣವನ್ನಪ್ಪಿದ್ದಾರೆ. 3 ಜನರ ಮೃತದೇಹವನ್ನು ಕುಟುಂಬಿಕರು ಕೊಂಡೊಯ್ದಿದ್ದಾರೆ. ಉಳಿದವರೆಲ್ಲರ ಅಂತಿಮ ಸಂಸ್ಕಾರವನ್ನು ಆಶ್ರಮದ ವತಿಯಿಂದಲೇ ನೆರವೇರಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ಮನೆಯಲ್ಲಿ ಇಬ್ಬರು ವೃದ್ಧರಿದ್ದರೂ ಸಲಹುವುದು ಕಷ್ಟ, ಆದರೆ ಆಶ್ರಮದಲ್ಲಿ ವೃದ್ಧರನ್ನು ಸಲಹುವ ಸಿಬ್ಬಂದಿಯಿಂದಾಗಿ ಈವರೆಗೂ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ತಾವು ಅನಾಥರಲ್ಲ ನಮ್ಮವರಿದ್ದಾರೆ ಅನ್ನುವ ಭಾವನೆ ಆಶ್ರಮವಾಸಿಗಳಿಗೆ ಬರುತ್ತದೆ. ಅನಾಥ ಭಾವನೆಗಳಿಂದ ಹೊರಬರುತ್ತಾರೆ. ಅನಾಥ ಹಿರಿಯರು ಇದ್ದಲ್ಲಿ ಹಿರಿಯ ನಾಗರಿಕ ವೇದಿಕೆಯಲ್ಲಿ ದೃಢ ಪತ್ರವನ್ನು ನಡೆಸಿದ ನಂತರ ಆಶ್ರಮಕ್ಕೆ ಕರೆತರಬಹುದು ಎಂದರು.

ಕ್ಷೇತ್ರ ಪದಾಧಿಕಾರಿ ಸುಜಾತಾ ಜೋಗಿ ಮಾತನಾಡಿ, ಹಿಂದಿನ ನೋವುಗಳನ್ನು ಮರೆಯಿರಿ, ಇಂದು ತಮ್ಮ ಮಕ್ಕಳಾಗಿ ಬಂದಿದ್ದೇವೆ. ಆಟ, ಹಾಡು, ಖುಷಿಯನ್ನು ಹಂಚುವ ಉದ್ದೇಶದೊಂದಿಗೆ ಕೂಟವನ್ನು ಆಯೋಜಿಸಿದ್ದೇವೆ. ದುಡಿದ ಅಲ್ಪಹಣದಲ್ಲಿ ಸಮಾಜಕ್ಕೆ ಸಹಕಾರವನ್ನು ನೀಡುತ್ತಾ ಪ್ರತೀ ವರ್ಷವೂ ಟೈಲರ್ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಅಸೋಸಿಯೇಷನ್‌ 28 ನೇ ವರ್ಷಕ್ಕೆ ಕಾಲಿಡುತ್ತಿದೆ. ಹಲವು ಸಮಾಜಸೇವೆ, ವೃತ್ತಿಬಾಂಧವರಿಗೆ ಅನುಕೂಲಕರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ ಎಂದರು.

ಈ ವೇಳೆ ಕಾರ್ಯಕ್ರಮಕ್ಕೆ ಸಹಕರಿಸಿದ ಜೆಪ್ಪಿನಮೊಗರುಬ ರೋಹಿತ್‌ ವೈನ್‌ ಶಾಪ್‌ ಮಾಲೀಕ ರೋಹಿತ್‌ ಸಾಲ್ಯಾನ್‌ ಅವರಿಗೆ ಅಭಿನಂದಿಸಲಾಯಿತು. ಈ ಸಂದರ್ಭ ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್‌ ಮಂಗಳಾದೇವಿ ವಲಯದ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ನಳಿನಿ ಸದಾಶಿವ ,ಉಪಾಧ್ಯಕ್ಷ ರಾದ ಅನಂತ್ ರಾಮ್, ಕ್ಷೇತ್ರ ಪದಾಧಿಕಾರಿಗಳಾದ ಅಶೋಕ್ ಕೋಟ್ಯಾನ್ , ಸಬಿತ ಸತೀಶ್, ಪದ್ಮನಾಭ ಜಲ್ಲಿಗುಡ್ಡೆ, ಮಾಜಿ ಅಧ್ಯಕ್ಷೆ ಸುಜಾತ ಆಚಾರ್ಯ, ಮಾಜಿ ಹಿರಿಯ ಸದಸ್ಯರು ಸೀತಾರಾಮ ಅಮೀನ್‌ , ರಾಜ್ಯದ ಮಾಜಿ ಅಧ್ಯಕ್ಷ ಪ್ರವೀಣ್ ಸಾಲ್ಯಾನ್‌, ಸ್ಥಾಪಕ ಸದಸ್ಯರುಗಳಾದ ವಸಂತ್‌ ಬಿ., ಮೋಹನ್‌, ರಮೇಶ್‌ ಮಾಡೂರು, ನಾರಾಯಣ್‌ ಬಿ.ಎನ್‌ ಹಾಗೂ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular