ಉಪ್ಪಿನಂಗಡಿ : ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ದಡದಲ್ಲಿ ಸೆ.3ರಂದು ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಇಳಂತಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಫಯಾಝ್ ಯು ಟಿ ಅವರು ಮೊಸಳೆಯನ್ನು ಮೊದಲು ಗಮನಿಸಿದ್ದು, ಸಂಜೆ ವೇಳೆ ನದಿಯ ದಂಡೆಯ ಮೇಲೆ ಬೃಹತ್ ಮೊಸಳೆ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿದ್ದಾರೆ ಬಳಿಕ ಮೊಸಳೆಯ ಛಾಯಾಚಿತ್ರವನ್ನು ಸೆರೆಹಿಡಿದ್ದಾರೆ.
ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮದಿಂದ ಸುಮಾರು 500 ಮೀಟರ್ ದೂರದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಈ ಪ್ರದೇಶವು ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ಸಮೀಪದಲ್ಲಿದೆ, ಇಲ್ಲಿ ಪಿಂಡ ಪ್ರದಾನ ಮತ್ತು ಪವಿತ್ರ ಸ್ನಾನದಂತಹ ಆಚರಣೆಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಈ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು ವಿಶೇಷವಾಗಿ ಪಿಂಡ ಪ್ರಧಾನಕ್ಕಾಗಿ ನದಿಗೆ ಇಳಿಯುವುದು ಇಲ್ಲಿ ಸಾಮಾನ್ಯವಾಗಿದೆ.