ಉತ್ತರಾಖಂಡ : ಉತ್ತರಾಖಂಡದ ಬದರಿನಾಥದಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಪತನಗೊಂಡು ಐವರು ಕನ್ನಡಿಗರು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಸಂಭವಿಸಿದೆ.
‘ಟ್ರಾನ್ಸ್ ಭಾರತ್ ಏವಿಯೇಷನ್’ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಬದರಿನಾಥದಿಂದ ಡೆಹ್ರಾಡೂನ್ನ ಸಹಸ್ರಧಾರಾ ಹೆಲಿಪ್ಯಾಡ್ಗೆ ಹಿಂದಿರುಗುತ್ತಿದ್ದ ವೇಳೆ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದ ಚಾಯ್ ಗ್ರಾಮದ ಸಮೀಪ ಪತನಗೊಂಡಿದೆ.
ಶುಕ್ರವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಈ ಘಟನೆ ಸಂಭವಿಸಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ನ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಜೋಶಿಮಠದ ಜೆ.ಪಿ. ಪವರ್ ಹೌಸ್ ಸಮೀಪದ ಬೆಟ್ಟದ ಇಳಿಜಾರಿನಲ್ಲಿ ಹೆಲಿಕಾಪ್ಟರ್ನ ಅವಶೇಷಗಳು ಪತ್ತೆಯಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಐವರು ಕನ್ನಡಿಗರು ಹಾಗೂ ದೆಹಲಿಯ ಪೈಲಟ್ ಸೇರಿದಂತೆ ಎಲ್ಲ ಆರು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಅರುಣ್ ಸಾಳುಂಕೆ ಅವರು ಪೊಲೀಸ್ ಅಧಿಕಾರಿಯಾಗಿದ್ದು, ಶಂಕರಗೌಡ ಅವರು ವಕೀಲರಾಗಿದ್ದರು ಎಂದು ವರದಿಯಾಗಿದೆ.
ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯ ಸೇನೆ, ಜಿಲ್ಲಾಡಳಿತ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಜಂಟಿಯಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಹೆಲಿಕಾಪ್ಟರ್ನ ಅವಶೇಷಗಳ ಸಮೀಪವೇ ಮೃತದೇಹಗಳು ಪತ್ತೆಯಾಗಿದ್ದು, ಅವುಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗಿದೆ.
ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಸಿದ್ಧತೆ
ದುರಂತದಲ್ಲಿ ಮೃತಪಟ್ಟ ಐವರು ಕನ್ನಡಿಗರ ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿಗಳ ಕಚೇರಿ ಹಾಗೂ ಕರ್ನಾಟಕದ ವಿಪತ್ತು ನಿರ್ವಹಣಾ ಆಯುಕ್ತರು ಉತ್ತರಾಖಂಡ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಕಚೇರಿಯೂ ಮೃತದೇಹಗಳನ್ನು ರಾಜ್ಯಕ್ಕೆ ತರಲು ಅಗತ್ಯ ಸಮನ್ವಯ ಸಾಧಿಸುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಪ್ರತಿಕೂಲ ಹವಾಮಾನದ ನಡುವೆ ಸಂಭವಿಸಿದ ಈ ಹೆಲಿಕಾಪ್ಟರ್ ದುರಂತ ಕರ್ನಾಟಕದ ಐದು ಕುಟುಂಬಗಳಲ್ಲಿ ಆಘಾತ ಮತ್ತು ದುಃಖದ ವಾತಾವರಣ ಸೃಷ್ಟಿಸಿದೆ.

