ಉಡುಪಿ : ನಿಯಂತ್ರಣ ತಪ್ಪಿದ ಕಾರು ಹಲವು ವಾಹನಗಳಿಗೆ ಡಿಕ್ಕಿ; ಆರೋಪಿಗಳು ಪರಾರಿ. ಉಡುಪಿ : ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಕಾರೊಂದು ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ಮಣಿಪಾಲದಲ್ಲಿ ಜುಲೈ 10, ಸೋಮವಾರ ನಡೆದಿದೆ. ಬಸ್ ನಿಲ್ದಾಣದ ಬಳಿ ಕಾರು ಮೊದಲು ಬಸ್ಗೆ ಡಿಕ್ಕಿ ಹೊಡೆದು ರಿವರ್ಸ್ ತೆಗೆದುಕೊಳ್ಳುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದಾರೆ. ಕಾರು ಪರ್ಕಳ ಕಡೆಯಿಂದ ಅತಿವೇಗದಿಂದ ಬಂದಿತ್ತು ಎಂದು ತಿಳಿದು ಬಂದಿದೆ. ಪೊಲೀಸರು ಕಾರನ್ನು ಚೇಸ್ ಮಾಡಿದರೂ ಕಾರಿನಲ್ಲಿದ್ದ ಮೂವರು ಕಾರನ್ನು ನಿಲ್ಲಿಸಿ ಸಮೀಪದ ಕಾಡಿಗೆ ಪರಾರಿಯಾಗಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರು ಮೂವರಿಗಾಗಿ ಹುಡುಕಾಟ ನಡೆಸಿದರೂ ಫಲಕಾರಿಯಾಗಲಿಲ್ಲ. ಕಾರಿನಲ್ಲಿದ್ದವರು ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವಿಸಿರಬಹುದು ಎಂದು ತಪಾಸಣೆ ನಡೆಸಿದಾಗ ಬೆಳಕಿಗೆ ಬಂದಿದೆ. ಕೊಡವೂರು ಮೂಲದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.