ಆನೇಕಲ್ : ಆನೇಕಲ್ ವಿಧಾನಸಭಾ ಕ್ಷೇತ್ರದ ಎರೆಡು ಬಾರಿ ಶಾಸಕರಾಗಿ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದ ಮಾಜಿ ಅರಣ್ಯ ಸಚಿವ ಎಂಪಿ ಕೇಶವ ಮೂರ್ತಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದು ಇಂದು ನಿಧನಹೊಂದಿದ್ದಾರೆ.
ದೊಡ್ಡ ಹಳ್ಳಿಯಂತಿದ್ದ ಆನೇಕಲ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸೂರಿಲ್ಲದವರಿಗೆ ಹಕ್ಕು ಪತ್ರ ನೀಡುವ ಮೂಲಕ, ಮೊದಲ ಡಾಂಬರು ರಸ್ತೆ, ಕಿರು ನೀರಾವರಿ ಯೋಜನೆಯಡಿ ಹಳ್ಳಿ ಹಳ್ಳಿಗೆ ನೀರು ಸರಭರಾಜು, ಹಳ್ಳಿ ಹಳ್ಳಿಗೂ ಸಮುದಾಯ ಭವನ ನಿರ್ಮಾಣ ಮಾಡಿದ ಖ್ಯಾತಿ ಯೊಂದಿಗೆ ಹತ್ತು ಹಲವು ಯೋಜನೆಗಳನ್ನು ಆನೇಕಲ್ ಕಡೆಗೆ ಹರಿಸುವಲ್ಲಿ ಶ್ರಮಸಿದ ಮೊದಲ ಕೀರ್ತಿ ಮರಸೂರು ಪಾಲಪ್ಪ ಕೇಶವಮೂರ್ತಿಯವರದ್ದು. ಮೊದಲ ಹೆಸರು ಕರಗಪ್ಪ ಎಂದಿದ್ದು ಅನಂತರ ಬೆಳೆದಂತೆ ಕೇಶವಮೂರ್ತಿ ಎಂದು ಹೆಸರು ಬದಲಿಸಿಕೊಂಡಿದ್ದರು. ತಂದೆ ಪಾಲಪ್ಪ ತಾಯಿ ಕಾಳಮ್ಮರ ನಾಲ್ಕು ಜನ ಮಕ್ಕಳಲ್ಲಿ ಒಂದು ಹೆಣ್ಣು, ಮೂರು ಗಂಡು ಮಕ್ಕಳಲ್ಲಿ ಇವರು ಮೂರನೇ ಮಗನಾಗಿ 30ರ ಜೂನ್ 1939 ರಲ್ಲಿ ಜನಿಸಿದ ಎಂಪಿ ಕರಗಪ್ಪ ಬಿಎಬಿಲ್ ಪದವಿ ಪಡೆದರು.
ಹುಟ್ಟೂರು ಮರಸೂರನ್ನು ಆಗಲೇ ಮಾದರಿ ಗ್ರಾಮವಾಗಿಸುವಲ್ಲಿ ಕಾಳಜಿ ವಹಿಸಿದ್ದರು. ಅಂಚೆ ಕಚೇರಿ, ಸರ್ಕಾರಿ ಪ್ರೌಢಶಾಲೆ, ಸಾರ್ವಜನಿಕ ಆಸ್ಪತ್ರೆ ಮತ್ತು ಪಶು ಆಸ್ಪತ್ರೆ ತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು.
ಜನತಾಪಕ್ಷದ ವೈ ರಾಮಕೃಷ್ಣರನ್ನು 1985 ರಲ್ಲಿ ಸೋಲಿಸುವ ಮುಖಾಂತರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಆನೇಕಲ್ ನ್ನು ತಂದರು. ಅನಂತರ ಮತ್ತೊಮ್ಮೆ 1989ರ ವಿಧಾನಸಭಾ ಚುನಾವಣೆಯಲ್ಲಿ ಅವರ ಅಭಿವೃದ್ದಿ ಕಾರ್ಯಗಳು ಫಲಕೊಟ್ಟು ಮತ್ತೆ ಶಾಸಕರಾದರು ಅನಂತರ ಸಿಎಂ ವೀರಪ್ಪಮೊಯಿಲಿ ಕಾಲದಲ್ಲಿ 1992ರ ನವೆಂಬರ್ 19 ರಿಂದ 11 ಡಿಸೆಂಬರ್ 1994ರ ವರೆಗೆ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು ಇದೇ ಅವಧಿಯಲ್ಲಿ ವೀರಪ್ಪನ್ ಉಪಟಳ ಹೆಚ್ಚಿತ್ತು ವೀರಪ್ಪನ್ ಮಣಿಸುವಲ್ಲಿ ಅರಣ್ಯ ಸಚಿವರಾಗಿ ದಿಟ್ಟ ಕ್ರಮ ಕೈಗೊಂಡಿದ್ದರು. ಅನಂತರ ಸಣ್ಣ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅನಂತರ 1998ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು.
ತಮಿಳುನಾಡು ಗಡಿಗೆ ಹೊಂದಿಕೊಂಡ ಆನೇಕಲ್ ಕ್ಷೇತ್ರದ ಹಳ್ಳಿಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದ ಕೇಶವಮೂರ್ತಿ ತನ್ನ 85ನೇ ವಯಸ್ಸಿಗೆ ಕೊನೆಯುಸಿರೆಳೆದರು. ಕೊನೆಗಾಲದಲ್ಲಿ ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡು ಬಿಜೆಪಿ ಸೇರಿ ಎಸ್ ಎಂ ಕೃಷ್ಣರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಆಗಾಗ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಪ್ರಖರ ಬಹು ದೀರ್ಘ ಭಾಷಣಗಳ ಮೂಲಕ ಅವರ ಅಗಾಧ ಜ್ಞಾನವನ್ನು ಅಂಕಿ ಅಂಶಗಳ ಮೂಲಕ ಹರಿಬಿಡುತ್ತಿದ್ದರು. ಈಗಲೂ ಆನೇಕಲ್ ಅಭಿವೃದ್ದಿಗೆ ಶ್ರಮಿಸಿದ ಯಾರಾದರೂ ಸಚಿವರಿದ್ದರೆ ಅದರಲ್ಲಿ ಅಗ್ರಗಣ್ಯ ಹೆಸರು ಇವರದ್ದು. ಆನೇಕಲ್ ಮೀಸಲು ಕ್ಷೇತ್ರದ ಅಭಿವೃದ್ದಿಯ ಹರಿಕಾರರಾಗಿ ಜನಾನುರಾಗಿಯಾಗಿದ್ದ ಹಿರಿಯ ರಾಜಕೀಯ ಮುತ್ಸದ್ಧಿ ಎಂಪಿ ಕೇಶವ ಮೂರ್ತಿ ಓರ್ವ ಮಗ ಶ್ರೀನಾಥ್ ರನ್ನು ಅಗಲಿದ್ದಾರೆ. ನಾಳೆ ಅವರ ಹೆಚ್ಎಸ್ಆರ್ ಬಡಾವಣೆಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ನಡೆಸಿಕೊಳ್ಳಲಾಗಿದೆ. ಆನೇಕಲ್ ಅಷ್ಟೇ ಅಲ್ಲದೆ ರಾಜ್ಯಾದ್ಯಾಂತ ಅಪಾರ ಹಿತೈಷಿಗಳನ್ನ ಪಡೆದಿರುವ ಕೇಶವಮೂರ್ತಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.