ಅಂಕೋಲಾ ; ಕಳೆದ ಹಲವು ದಿನಗಳಿಂದ ಸುರಿಯುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದಾರೆ.

ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ ಉಂಟಾಗಿದೆ. ಅಂಕೋಲಾ ತಾಲೂಕಿನ ಶಿರೂರು ಬಳಿ ಅಂಗಡಿಯೊಂದರ ಮೇಲೆ ಗುಡ್ಡ ಕುಸಿದಿದೆ. 9 ಮಂದಿ ಗುಡ್ಡದ ಮಣ್ಣಿನಡಿ ಸಿಲುಕಿರುವ 7 ಮಂದಿ ಸಾವನಪ್ಪಿದ್ದು ,ಓರ್ವೆ ಮಹಿಳೆಯ ಮೃತದೇಹ ಹೊರತೆಗೆಯಲಾಗಿದೆ. ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ ನದಿಗೆ ಉರುಳಿದ್ದು, ನದಿಯಲ್ಲಿ ತೇಲುತ್ತಿರುವ ದೃಶ್ಯ ಲಭಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿ ಧಾವಿಸಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗುಡ್ಡ ಕುಸಿದು 7 ಜನ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮಣ್ಣಿನಡಿ ಸಿಲುಕಿರುವವರ ರಕ್ಷಿಸಲು ಸೂಚನೆ ನೀಡಿದ್ದೇನೆ. ಎನ್ಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಒಂದೇ ಕುಟಂಬದ ಐವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ನಾಯ್ಕ(47), ಶಾಂತಿ ನಾಯ್ಕ(36), ರೋಶನ(11), ಅವಂತಿಕಾ(6), ಜಗನ್ನಾಥ(55) ಎಂಬುವವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಹಾಗೂ ಚಾ ಕುಡಿಯಲು ನಿಲ್ಲಿಸಿದ ಗ್ಯಾಸ್ ಟ್ಯಾಂಕರ್ ಚಾಲಕರು ಹಾಗೂ ಟೀ ಕುಡಿಯಲು ನಿಲ್ಲಿಸಿದ ಇನ್ನಿತರರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ.ಇದೀಗ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
5 ಮಂದಿ ಕುಟುಂಬ ವಾಸವಿದ್ದ ಅಂಗಡಿ ಮೇಲೆ ಗುಡ್ಡ ಕುಸಿದಿದ್ದು, ಗ್ರಾಹಕರು ಸೇರಿ ಮನೆಯವರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಧಾರಾಕಾರ ಮಳೆಯಿಂದಾಗಿ ಹೆದ್ದಾರಿ ಪಕ್ಕದ ಗುಡ್ಡ ಸಡಿಲಗೊಂಡಿತ್ತು. ಗಂಗಾವಳಿ ನದಿಗೆ ಹೊಂದಿಕೊಂಡಿರುವ ಶಿರೂರು ಪ್ರದೇಶ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕುಮಟಾ ನಡುವೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಒಟ್ಟಿನಲ್ಲಿ ರಣಭೀಕರ ಮಳೆ ಜನಸಾಮಾನ್ಯರಲ್ಲಿ ಭಯದವಾತಾವರಣ ಸೃಷ್ಟಿಸಿದೆ.


